ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್ಎಸ್) ಅಂತರಿಕ್ಷಯಾನ ಕೈಗೊಳ್ಳಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜೂನ್ 10ರಂದು ಪ್ರಯಾಣ ಆರಂಭಿಸಲಿದ್ದಾರೆ. ಬೆಳಿಗ್ಗೆ 5.52ಕ್ಕೆ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಫಾಲ್ಕನ್ –9 ರಾಕೆಟ್, ಗಗನಯಾನಿಗಳಿರುವ ‘ಡ್ರ್ಯಾಗನ್’ ವ್ಯೋಮನೌಕೆಯನ್ನು ಹೊತ್ತು ಐಎಸ್ಎಸ್ನತ್ತ ಹಾರಲಿದೆ. ಜೂನ್ 11ರಂದು
ತಡರಾತ್ರಿ 12.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30) ಡ್ರ್ಯಾಗನ್ ಗಗನನೌಕೆಯನ್ನು ಐಎಸ್ಎಸ್ನೊಂದಿಗೆ ಜೋಡಣೆ (ಡಾಕಿಂಗ್) ಗೊಳ್ಳಲಿದೆ.
‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಐಎಸ್ಎಸ್ಗೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್ನ ಸ್ಲಾವೋಸ್ ಯು.ವಿನ್ಸೀವ್ಸ್ಕಿ ಪಯಣಿಸಲಿದ್ದಾರೆ.
‘ಇದೊಂದು ಅದ್ಭುತ ಪಯಣ’ ಎಂದು ಬಣ್ಣಿಸಿದ ಅವರು ಈ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿರುವ ನಾನು ಅದೃಷ್ಟಶಾಲಿ’ ಎಂದಿದ್ದಾರೆ.ಭಾರತೀಯ ವಾಯುಪಡೆಯ ಪೈಲಟ್, 39 ವರ್ಷದ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆರಳುತ್ತಿರುವ ಭಾರತದ ಎರಡನೇ ಗಗನಯಾನಿಯಾಗಿದ್ದಾರೆ. 1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ, ಭಾರತದ ಮತ್ತೊಬ್ಬ ಗಗನಯಾನಿ ಅಂತರಿಕ್ಷ ಯಾತ್ರೆ ಕೈಗೊಳ್ಳುತ್ತಿದ್ದಾರೆ.