ನವದೆಹಲಿ: ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನಾಳೆ(ಮೇ.4) ಪ್ರಕಟವಾಗಲಿದೆ.ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ.ಮತ ಎಣಿಕೆಕೆ ಸಿದ್ಧತೆಗಳು ಪೂರ್ಣಗೊಂಡಿದೆ.ಕೇರಳ, ಅಸ್ಸಾಂ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಹಾಗೂ
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿದ್ದು 148 ಕ್ಷೇತ್ರಗಳನ್ನು ಗೆಲ್ಲುವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಪೈಕಿ 118 ಸ್ಥಾನ, ಕೇರಳದಲ್ಲಿ140 ಸ್ಥಾನಗಳಲ್ಲಿ 71, ಅಸ್ಸಾಂನಲ್ಲಿ 126 ಸ್ಥಾನಗಳಲ್ಲಿ 64 ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಲ್ಲಿ 16 ಸ್ಥಾನ ಪಡೆದ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಬಹುದು. ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದ್ದು ಒಂಭತ್ತು ಗಂಟೆಯ ವೇಳೆಗೆ ಮೊದಲ ಫಲಿತಾಂಶದ ಸೂಚನೆ ಲಭ್ಯವಾಗಬಹುದು. 11 ಗಂಟೆಯ ವೇಳೆಗೆ ಬಹುತೇಕ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ.
ಚುನಾವಣೆ ಮುಗಿದ ಬಳಿಕ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್,ಪಶ್ಚಿಮ ಬಂಗಾಳದಲ್ಲಿ ಬಿಜೆಪಿ,ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ,ಅಸ್ಸಾಂನಲ್ಲಿ ಮತ್ತು ಪುದುಚೇರಿಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದೆ.












