ಇಡುಕ್ಕಿ (ಕೇರಳ): ಹುಲಿ ಮತ್ತು ನಾಯಿ ಒಂದೇ ಗುಂಡಿಗೆ ಬಿದ್ದ ಘಟನೆ ಕೇರಳ ತಮಿಳುನಾಡು ಗಡಿಯಲ್ಲಿರುವ ಮಯಿಲಾದುಂಪರೈ ಬಳಿ ನಡೆದಿದೆ. 9 ಅಡಿ ಆಳದ ಗುಂಡಿಯೊಂದರಲ್ಲಿ ಸಿಲುಕಿದ್ದ ಹುಲಿ ಮತ್ತು ನಾಯಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹುಲಿ, ನಾಯಿಯನ್ನು ಅಟ್ಟಿಸಿಕೊಂಡು
ಹೋಗುವ ವೇಳೆ ಗುಂಡಿಗೆ ಬಿದ್ದಿವೆ. ಭಾನುವಾರ ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ. ಹುಲಿಯನ್ನು ಶಾಂತಗೊಳಿಸಲು ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ನಾಯಿಯೂ ಬೊಗಳುತ್ತಿದ್ದ ಕಾರಣ ಅದಕ್ಕೂ ಅರವಳಿಕೆ ನೀಡಿ ಶಾಂತಗೊಳಿಸಲಾಗಿತ್ತು. ಮಧ್ಯಾಹ್ನದ ವೇಳೆ ಹುಲಿ ಪ್ರಶಾಂತವಾಗಿತ್ತು. ಬಲೆಯ ಮೂಲಕ ಎರಡೂ ಪ್ರಾಣಿಯನ್ನು ಮೇಲಕ್ಕೆತ್ತಲಾಗಿದೆ. ಪ್ರಾಣಿಗಳಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಹುಲಿಯನ್ನು ಪೆರಿಯಾರ್ ಪ್ರಾಣಿಧಾಮಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.