ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ 275 ವರ್ಷಗಳ ಬಳಿಕ ಇಂದು ಮಹಾಕುಂಭಾಭಿಷೇಕ ನೆರವೇರಿತು. ನೂರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.ಈ ಪ್ರಾಚೀನ ದೇಗುಲದ ನವೀಕರಣ ಕಾರ್ಯ ಇತ್ತೀಚೆಗೆ ಮುಕ್ತಾಯವಾಗಿತ್ತು.ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಮತ್ತು ತಿರುವಂಬಾಡಿ ಶ್ರೀ ಕೃಷ್ಣ ದೇವಾಲಯದಲ್ಲಿ
(ಮುಖ್ಯ ದೇವಾಲಯ ಸಂಕೀರ್ಣದೊಳಗೆ ಇದೆ) ‘ಅಷ್ಟಬಂಧ ಕಳಸ’ಗಳ ಲೋಕಾರ್ಪಣೆ ಬೆಳಿಗ್ಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.ಭಾನುವಾರ ಬೆಳಿಗ್ಗೆ 7.40ರಿಂದ 8.40 ರ ನಡುವಿನ ಶುಭ ಸಮಯದಲ್ಲಿ ಅರ್ಚಕರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು ಎಂದು ಅವರು ಹೇಳಿದ್ದಾರೆ.
ತಿರುವಾಂಕೂರು ರಾಜಮನೆತನದ ಪ್ರಸ್ತುತ ಮುಖ್ಯಸ್ಥ ಮೂಲಂ ತಿರುನಾಳ್ ರಾಮ ವರ್ಮ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಧಾರ್ಮಿಕ ವಿಧಿಗಳು ಪ್ರಾರಂಭವಾದವು.
ವರ್ಮಾ ಮತ್ತು ಇತರ ರಾಜಮನೆತನದ ಸದಸ್ಯರ ಸಮ್ಮುಖದಲ್ಲಿ, ತಂತ್ರಿ ಮೊದಲು ತಿರುವಂಬಾಡಿ ದೇವಾಲಯದಲ್ಲಿ ಅಷ್ಟಬಂಧ ಕಲಶ ನೆರವೇರಿಸಿದರು. ನಂತರ, ವಿಶ್ವಕ್ಸೇನ ವಿಗ್ರಹದ ಪುನರ್ ಪ್ರತಿಷ್ಠಾಪನೆ ಬೆಳಿಗ್ಗೆ 8.00ಗಂಟೆಗೆ ನಡೆಯಿತು ಎಂದು ದೇವಾಲಯದ ಮೂಲಗಳು ತಿಳಿಸಿವೆ.ಈಗ ನವೀಕರಿಸಿ ಪುನಃ ಸ್ಥಾಪಿಸಲಾದ ವಿಶ್ವಕ್ಸೇನ ವಿಗ್ರಹವು ಸುಮಾರು 300 ವರ್ಷಗಳಷ್ಟು ಹಳೆಯದಾಗಿದ್ದು, ‘ಕಟು ಸರ್ಕರ ಯೋಗ’ದಲ್ಲಿ ನಿರ್ಮಿಸಲಾಗಿದೆ.ಮಹಾ ಕುಂಭಾಭಿಷೇಕಕ್ಕೂ ಮೊದಲು ಕಳೆದ ವಾರ ಆಚಾರ್ಯ ವಾರಣಂ, ಪ್ರಸಾದ ಶುದ್ಧಿ, ಧಾರ, ಕಲಸಂ ಮತ್ತು ಇತರ ಆಚರಣೆಗಳನ್ನು ದೇವಾಲಯದಲ್ಲಿ ನಡೆಸಲಾಯಿತು
ಮಹಾ ಕುಂಭಾಭಿಷೇಕದ ಉದ್ದೇಶವು ಆಧ್ಯಾತ್ಮಿಕ ಶಕ್ತಿಯನ್ನು ಬಲಪಡಿಸುವುದು ಮತ್ತು ದೇವಾಲಯದ ಪಾವಿತ್ರ್ಯವನ್ನು ಪುನರುಜ್ಜೀವನಗೊಳಿಸುವುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ 275 ವರ್ಷಗಳ ನಂತರ ಇಂತಹ ಸಮಗ್ರ ನವೀಕರಣ ಮತ್ತು ಅದರ ಜೊತೆಗಿನ ಆಚರಣೆಗಳು ನಡೆದಿದೆ.2017ರ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯ ನಿರ್ದೇಶನದಂತೆ ನವೀಕರಣವನ್ನು ಕೈಗೊಳ್ಳಲಾಗಿತ್ತು.