ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.ಸಂಜೆ 6 ಗಂಟೆ ವೇಳೆಗೆ ತಮಿಳುನಾಡಿನಲ್ಲಿ ಶೇ 84.29ರಷ್ಟು, ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನದಲ್ಲಿ ಶೇ 91.78ರಷ್ಟು ಮತದಾನ ದಾಖಲಾಗಿದೆ ಎಂದು
ಚುನಾವಣೆ ಆಯೋಗ ತಿಳಿಸಿದೆ.ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ರಾಜ್ಯವು ತನ್ನ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಿತು. ಒಟ್ಟು 5.73 ಕೋಟಿ ಮತದಾರರಲ್ಲಿ ಶೇ 84.29ರಷ್ಟು ಮತದಾನವಾಗಿದೆ. 2011ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 78.29ರಷ್ಟು ಮತದಾನವೇ ರಾಜ್ಯದ ಗರಿಷ್ಠ ಪ್ರಮಾಣವಾಗಿತ್ತು.ಎಸ್ಐಆರ್ ಪರಿಣಾಮ ಮತದಾರರ ಪಟ್ಟಿಯ ಗಾತ್ರ 5.73 ಕೋಟಿಗೆ ಇಳಿಕೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಸುಮಾರು 6.29 ಕೋಟಿ ಮತದಾರರಿದ್ದರು ಎಂದು ಆಯೋಗ ತಿಳಿಸಿದೆ.
ಕರೂರಿನಲ್ಲಿ ಶೇ 91.86, ಚೆನ್ನೈ ಶೇ.83.09, ಮದುರೈ ಶೇ 80.15, ಕೊಯಮತ್ತೂರು ಶೇ 84.40, ತಿರುಚಿರಾಪಳ್ಳಿ ಶೇ 85.04 ರಷ್ಟು ಮತದಾನವಾಗಿದೆ. ಕರೂರು ರಾಜ್ಯದಲ್ಲೇ ಮೊದಲ ಸ್ಥಾನಪಡೆದಿದೆ.
ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಪ್ರಮುಖರಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ 152 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ 91.78ರಷ್ಟು ಮತದಾನವಾಗಿದೆ.
ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚಿನ ಮತದಾನದ ಪ್ರಮಾಣವಾಗಿದೆ.294 ವಿಧಾನಸಭಾ ಕ್ಷೇತ್ರಗಳ ಪೈಕಿ 152 ಸ್ಥಾನಗಳಿಗೆ ಗುರುವಾರ ಬಿಗಿ ಭದ್ರತೆಯ ನಡುವೆ ಮತದಾನ ನಡೆಯಿತು. 16 ಜಿಲ್ಲೆಗಳಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ 167 ಮಹಿಳೆಯರು ಸೇರಿದಂತೆ ಒಟ್ಟು 1,478 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿ 6 ಗಂಟೆಗೆ ಮುಕ್ತಯವಾಯಿತು.ಬಂಗಾಳದಲ್ಲಿ ಎರಡನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದ್ದು ಮತ ಎಣಿಕೆ ಮೇ 4ರಂದು ನಡೆಯಲಿದೆ.














