ನವದೆಹಲಿ: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆ 850ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ.ಮಹಿಳಾ ಮಿಸಲಾತಿ ಕಾಯ್ದೆಗೆ 131ನೇ ಸಂವಿಧಾನ ತಿದ್ದುಪಡಿ ತರುವ ಮೂಲಕ
ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿತ್ತು.ಆದರೆ, ಮೂರನೇ ಎರಡರಷ್ಟು ಬಹುಮತ ಸಿಗದೆ ಮಸೂದೆಗೆ ಸೋಲಾಗಿದೆ. 528 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಹಾಗಾಗಿ, ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ 328 ಮತಗಳ ಅವಶ್ಯಕತೆ ಇತ್ತು. ಮಸೂದೆ ಪರ 298 ಮತಗಳು ಬಿದ್ದಿದ್ದು, ವಿರುದ್ಧ 230 ಮತಗಳು ಬಿದ್ದಿವೆ. ಸಂವಿಧಾನ ತಿದ್ದುಪಡಿ ಮಸೂದೆಯಾಗಿರುವುದರಿಂದ ಮೂರನೇ ಎರಡರಷ್ಟು ಬಹುಮತ ಅತ್ಯಗತ್ಯವಾಗಿತ್ತು.
ಸದನದಲ್ಲಿ ಹಾಜರಿದ್ದ ಒಟ್ಟು ಸದಸ್ಯರು ಮತ್ತು ಚಲಾವಣೆಯಾದ ಮತಗಳ ಪೈಕಿ ಕನಿಷ್ಠ ಮೂರನೇ ಎರಡರಷ್ಟು ಬಹುಮತವನ್ನು ಪಡೆಯದ ಕಾರಣ ಈ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ. ಆದ್ದರಿಂದ, ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸೋಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು.ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಿರುವುದರಿಂದ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಕೋಟಾ ತಿದ್ದುಪಡಿ ಮಾಡುವ ಮತ್ತೊಂದು ಮಸೂದೆಯನ್ನು ಮುಂದುವರಿಸುವುದಿಲ್ಲ ಎಂದು ವರದಿ ತಿಳಿಸಿದೆ.
















