ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದೆ.140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಯುಡಿಎಫ್ 102 ಸ್ಥಾನಗಳಲ್ಲಿ ಗೆಲುವು ಪಡೆದಿದೆ.
ಮತ್ತೊಂದೆಡೆ ಆಡಳಿತರೂಢ ಎಲ್ಡಿಎಫ್ ಹೀನಾಯ ಸೋಲನುಭವಿಸಿದ್ದು 35 ಸ್ಥಾನಗಳಲ್ಲಿ
ಮಾತ್ರ ಗೆಲುವು ಸಾಧಿಸಿದೆ. ಎನ್ಡಿಎ 3 ಸ್ಥಾನಗಳಲ್ಲಿ ಗೆಲುವವು ಸಾಧಿಸಿದೆ. ಮೊದಲ ಆರು ಸುತ್ತಿನ ಮತ ಎಣಿಕೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿನ್ನಡೆಯಲ್ಲಿದ್ದರು. ಬಳಿಕ ಮುನ್ನಡೆ ಸಾಧಿಸಿ ನಿಕಟ ಸ್ಪರ್ಧಿ ವಿ.ಪಿ. ಅಬ್ದುಲ್ ರಶೀದ್ ವಿರುದ್ಧ ಗೆಲುವು ಸಾಧಿಸಿದರು.ಆದರೆ
ಆಡಳಿತರೂಡ ಎಲ್ಡಿಫ್ ಮೈತ್ರಿಕೂಟದ 13 ಸಚಿವರು ಪರಾಭವಗೊಂಡರು. ಸಚಿವರಾದ ವೀಣಾ ಜಾರ್ಜ್, ಎಂ.ಬಿ. ರಾಜೇಶ್, ಒ.ಆರ್. ಕೇಲು, ಆರ್. ಬಿಂದು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ.ಬಿ. ಗಣೇಶ್ ಕುಮಾರ್, ವಿ.ಎನ್. ವಾಸವನ್, ವಿ. ಶಿವನ್ಕುಟ್ಟಿ, ವಿ. ಅಬ್ದುರಹೀಮಾನ್, ಕಡನ್ನಪಳ್ಳಿ ರಾಮಚಂದ್ರನ್, ಎ.ಕೆ. ಶಶೀಂದ್ರನ್ ಹಾಗೂ ರೋಶಿ ಆಗಸ್ಟಿನ್ ಪರಾಭವಗೊಂಡರು. ಈ ಮಧ್ಯೆ 50 ವರ್ಷಗಳ ಬಳಿಕ ಭಾರತದಲ್ಲಿ ಯಾವುದೇ ರಾಜ್ಯದಲ್ಲಿ ಅಧಿಕಾರ ಇಲ್ಲದ ಸ್ಥಿತಿ ಕಮ್ಯುನಿಸ್ಟ್ ಪಕ್ಷಕ್ಕೆ ಬಂದಿದೆ. ಪಶ್ಚಿಮ ಬಂಗಾಳ, ತ್ರಿಪುರಾದಲ್ಲಿ ಅಧಿಕಾರ ನಷ್ಟವಾದಾಗ ಕೇರಳದಲ್ಲಿ ಮಾತ್ರ ಗಟ್ಟಿಯಾಗಿದ್ದ ಅಧಿಕಾರ ನಷ್ಟವಾಗುವುದರೊಂದಿಗೆ ಇದೀಗ ದೇಶದಲ್ಲಿ ಯಾವುದೇ ರಾಜ್ಯದಲ್ಲಿಯೂ ಅಧಿಕಾರ ಇಲ್ಲದ ಸ್ಥಿತಿ ಸಿಪಿಐಎಂ ನೇತೃತ್ವದ ಎಡಪಕ್ಷಗಳಿಗೆ ಉಂಟಾಗಿದೆ.












