ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಮಂಡಿಸಲಾಗಿದ್ದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ
ಸೋಲಾದ ಒಂದು ದಿನದ ಬಳಿಕ ಪ್ರಧಾನಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ’.ಮಹಿಳಾ ಮೀಸಲು ಅನುಷ್ಠಾನದ ವಿಷಯ ಮತ್ತು ಸಂಸತ್ತಿನಲ್ಲಿ ಶುಕ್ರವಾರ ವಿರೋಧ ಪಕ್ಷಗಳು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯ ವಿರುದ್ಧ ಮತ ಚಲಾಯಿಸಿದ ಘಟನೆಗಳ ಬಗ್ಗೆ ಮೋದಿ ಮಾತನಾಡುವ ನಿರೀಕ್ಷೆ ಇದೆ.
2011ರ ಜನಗಣತಿಯ ಆಧಾರದ ಮೇಲೆ 2029ರ ಸಂಸತ್ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸುವ ಪ್ರಸ್ತಾಪ ಇತ್ತು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯಲ್ಲಿ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಕುರಿತೂ ಪ್ರಸ್ತಾಪಿಸಲಾಗಿತ್ತು.
ನಿರ್ಣಾಯಕ ಸಂವಿಧಾನ ತಿದ್ದುಪಡಿ ಮಸೂದೆಯ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ, ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಗಲಿಲ್ಲ.
ಶುಕ್ರವಾರ ಸಂಜೆ ನಡೆದ ಮತದಾನದಲ್ಲಿ 528 ಸಂಸದರು ಮತದಾನ ಮಾಡಿದ್ದರು. ಬಹುಮತಕ್ಕೆ ಸರ್ಕಾರಕ್ಕೆ 352 ಮತಗಳ ಅಗತ್ಯವಿತ್ತು. ಮಸೂದೆ ಪರ 298 ಮತಗಳು ವಿರುದ್ಧ 230 ಮತಗಳು ಬಿದ್ದಿದ್ದವು.
















