ನವದೆಹಲಿ:ವಿಧಾನಸಭೆ ಚುನಾವಣೆ ನಡೆಯುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂದು ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ.234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ
152 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದ ನಡುವೆ ನೇರ ಪೈಪೋಟಿ ಇದೆ. ನಟ ವಿಜಯ್ ನೇತೃತ್ವದ ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ ಕೂಡ ಭರವಸೆ ಮೂಡಿಸಿದೆ. ಅಷ್ಟಲ್ಲದೆ, ನಿರ್ದೇಶಕ ಸೀಮನ್ ಅವರ ಎನ್ಟಿಕೆ ಪಕ್ಷವೂ ಸ್ಪರ್ಧೆಯಲ್ಲಿದ್ದು, ಕದನ ಕಣ ಕುತೂಹಲ ಮೂಡಿಸಿವೆ.
ತಮಿಳುನಾಡಿನಲ್ಲಿ ಒಟ್ಟು 5.73 ಕೋಟಿ ಮತದಾರರಿದ್ದು, ಈ ಪೈಕಿ 2.93 ಕೋಟಿ ಪುರುಷರು, 2.83 ಕೋಟ ಮಹಿಳೆಯರು ಮತ್ತು 7,728 ತೃತೀಯ ಲಿಂಗಿಗಳು. 33,133 ಕೇಂದ್ರಗಳ 75,064 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, 4,023 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಮತದಾನ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ
ಭಾರಿ ಭದ್ರತೆಯೊಂದಿಗೆ ಆರಂಭವಾಗಿದೆ. ಜನರು ಬೆಳಿಗ್ಗೆ 7ಕ್ಕೇ ಮತಗಟ್ಟೆಗಳ ಎದುರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ತೃಣಮೂಲ ಕಾಂಗ್ರೆಸ್ಗೆ ಬಿಜೆಪಿ ಸವಾಲೊಡ್ಡಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 1.75 ಕೋಟಿ ಮಹಿಳೆಯರು, 465 ತೃತೀಯ ಲಿಂಗಿಗಳು ಸೇರಿದಂತೆ 3.60 ಕೋಟಿಗೂ ಹೆಚ್ಚು ಅರ್ಹ ಮತದಾರರು ಮೊದಲ ಹಂತದಲ್ಲಿ ಮತ ಚಲಾಯಿಸಲಿದ್ದಾರೆ.
ಮೊದಲ ಹಂತದಲ್ಲಿ 8,000ಕ್ಕೂ ಅಧಿಕ ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಗುರುತಿಸಲಾಗಿದೆ. 2.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.ಎರಡನೇ ಹಂತದ ಮತದಾನವು ಏಪ್ರಿಲ್ 29ರಂದು ನಡೆಯಲಿದೆ.














