ಚೆನ್ನೈ:ತೀವ್ರ ಕುತೂಹಲ ಮೂಡಿಸಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು ‘ತಮಿಳಗ ವೆಟ್ರಿ ಕಳಗಂ’ ಮುಖಂಡ ದಳಪತಿ ವಿಜಯ್ ಅಕ್ಷರಷಃ ಅಲೆ ಎಬ್ಬಿಸಿದ್ದಾರೆ. ರಾಜ್ಯದ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮುಂದುವರಿದಿದೆ.ಹೊಸತಾಗಿ
ರೂಪುಗೊಂಡ ವಿಜಯ್ ಅವರ ಟಿವಿಕೆ 104 ಸ್ಥಾನಗಳೊಂದಿಗೆ ಮುನ್ನಡೆ ಗಳಿಸಿ ಡಿಎಂಕೆ ಮತ್ತು ಎಡಿಎಂಕೆಗೆ ಸಡ್ಡು ಹೊಡೆದಿದೆ. ಎಡಿಎಂಕೆ 80 ಸ್ಥಾನಗಳಲ್ಲಿ ಮತ್ತು ಆಡಳಿತಾರೂಢ ಡಿಎಂಕೆ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.ಹೊಸತಾಗಿ ರೂಪುಗೊಂಡ ಟಿವಿಕೆ ತಮಿಳುನಾಡಿನಲ್ಲಿ ಅಕ್ಷರಷಃ ಅಲೆ ಎಬ್ಬಿಸಿದೆ. ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಒಂದು ಪಂಚಾಯತ್ನಲ್ಲಿ ಕೂಡ ಅಧಿಕಾರ ಇಲ್ಲದ ಟಿವಿಕೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸಲಿದೆ.ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಾದ ಡಿಎಂಕೆ, ಎಡಿಎಂಕೆ ಮತ್ತು ಟಿವಿಕೆ ನಡುವೆ ಕಠಿಣ ಪೈಪೋಟಿ ನಡೆದಿತ್ತು.ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ
ಕಾಣದ ಸಂಚಲನವನ್ನ ನಟ ವಿಜಯ್ ಸೃಷ್ಟಿಸಿದ್ದಾರೆ. ದಶಕಗಳಿಂದ ಆಳ್ವಿಕೆ ನಡೆಸಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆ ಈಗ ದಳಪತಿ ಪವರ್ಗೆ ನಲುಗಿದೆ. ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಈಗ ಇತಿಹಾಸ ಬರೆಯುತ್ತಿದೆ. ಅಚ್ಚರಿಯ ಫಲಿತಾಂಶದ ಹಾದಿಯಲ್ಲಿರುವ ಟಿವಿಕೆ ಮುನ್ನಡೆ ಸಾಧಿಸುವ ಮೂಲಕ ಡಿಎಂಕೆ ಮತ್ತು ಎಐಡಿಎಂಕೆ (AIADMK) ನಂತಹ ಘಟಾನುಘಟಿ ಪಕ್ಷಗಳ ನಿದ್ದೆಗೆಡಿಸಿದೆ. ದಶಕಗಳಿಂದ ಕೇವಲ ಎರಡು ಪಕ್ಷಗಳ ನಡುವೆ ಇರುತ್ತಿದ್ದ ಪೈಪೋಟಿಗೆ ವಿಜಯ್ ಈಗ ಮೂರನೇ ಶಕ್ತಿಯಾಗಿದೆ.
ವಿಜಯ್ ಟಿವಿಕೆ ಪಕ್ಷ ಮುನ್ನಡೆಗೆ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರು ದ್ರಾವಿಡ ಪಕ್ಷಗಳ ಹಳೆಯ ಸಿದ್ಧಾಂತಗಳಿಗಿಂತ ವಿಜಯ್ ಅವರ ಹೊಸ ಆಲೋಚನೆಗಳಿಗೆ ಫಿದಾ ಆಗಿದ್ದಾರೆ. ವಿಜಯ್ ಅವರ ಸ್ಟೈಲ್, ಅವರ ಭಾಷಣದ ರೀತಿ ಮತ್ತು ಸೋಶಿಯಲ್ ಮೀಡಿಯಾದಲ್ಲಿನ ಅವರ ಪ್ರಭಾವವು ಯುವಜನತೆಯನ್ನು ದೊಡ್ಡ ಮಟ್ಟದಲ್ಲಿ ಟಿವಿಕೆ ಕಡೆಗೆ ಎಳೆದು ತಂದಿದೆ ಅಂತ ಹೇಳಲಾಗ್ತಿದೆ.
‘ಬದಲಾವಣೆ’ಯನ್ನು ಬಯಸುತ್ತಿದ್ದ ಜನರಿಗೆ ವಿಜಯ್ ಒಂದು ಪರಿಶುದ್ಧ ಪರ್ಯಾಯವಾಗಿ ಕಾಣುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರು ನೀಡುತ್ತಿರುವ ಘೋಷಣೆಗಳು ಮತ್ತು ಯಾವುದೇ ಗದ್ದಲವಿಲ್ಲದೆ ನೆಲಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅವರ ರೀತಿ ಜನ ಸಾಮಾನ್ಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನಿಸುತ್ತಿದೆ.ಯುವಕರಷ್ಟೇ ಅಲ್ಲ, ಮಹಿಳಾ ಮತದಾರರು ಕೂಡ ವಿಜಯ್ ಪರವಾಗಿ ನಿಂತಿದ್ದಾರೆ ಅಂತ ಹೇಳಬಹುದು. ಸಿನಿಮಾಗಳಲ್ಲಿ ವಿಜಯ್ ಅವರ ಕೌಟುಂಬಿಕ ಚಿತ್ರಣ ಮತ್ತು ಸಮಾಜಮುಖಿ ಕೆಲಸಗಳು ಮಹಿಳೆಯರಲ್ಲಿ ಅವರ ಬಗ್ಗೆ ದೊಡ್ಡ ಗೌರವ ಮೂಡಿಸಿದೆ. ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಅವರು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಈಗ ಮತಗಳ ರೂಪದಲ್ಲಿ ಟಿವಿಕೆ ಪಕ್ಷದ ಖಾತೆ ಸೇರುತ್ತಿವೆ.ವಿಜಯ್ ಅವರಿಗೆ ತಮಿಳುನಾಡಿನಾದ್ಯಂತ ಲಕ್ಷಾಂತರ ಅಭಿಮಾನಿ ಸಂಘಗಳಿವೆ. ಈ ಸಂಘಗಳನ್ನು ವಿಜಯ್ ರಾತ್ರೋರಾತ್ರಿ ರಾಜಕೀಯ ಕಾರ್ಯಕರ್ತರನ್ನಾಗಿ ಪರಿವರ್ತಿಸಿದ್ದಾರೆ. ಪ್ರತಿ ಮತಗಟ್ಟೆಯ ಮಟ್ಟದಲ್ಲಿ ಈ ಅಭಿಮಾನಿಗಳು ಹಗಲಿರುಳು ಕೆಲಸ ಮಾಡಿದ್ಸಾರೆ.












