ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್, ಸರಣಿಶ್ರೇಷ್ಠ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡು ವೈಭವ್ ಸೂರ್ಯವಂಶಿ ಮಿಂಚಿದ್ದಾರೆ. 15 ವರ್ಷದ ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಹೆಸರುವಾಸಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್, ಒಂದೇ ಐಪಿಎಲ್ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯುದ್ಧಕ್ಕೂ
ವೈಭವ್ ಸೂರ್ಯಂಶಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅವರು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ, ಅವರಿಗೆ ‘ಸರಣಿಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಆಡಿದ 16 ಇನಿಂಗ್ಸ್ಗಳಿಂದ 1 ಶತಕ ಮತ್ತು 5 ಅರ್ಧಶತಕ ಸಹಿತ, 49.50 ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಆ ಮೂಲಕ, ಐಪಿಎಲ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು. 2ನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ 732 ರನ್ ಗಳಿಸಿದ್ದಾರೆ.
ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರನಿಗೆ ನೀಡುವ ‘ಏಂಜಲ್ ಒನ್ ಸೂಪರ್ ಸಿಕ್ಸರ್ ಆಫ್ ದ ಸೀಸನ್’ ಪ್ರಶಸ್ತಿಯನ್ನು ಸೂರ್ಯವಂಶಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಅವರು, 16 ಇನಿಂಗ್ಸ್ಗಳಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ದಾಖಲಿಸಿದ ಅತ್ಯಧಿಕ ಸಿಕ್ಸರ್ಗಳಾಗಿವೆ.
ಅತ್ಯಧಿಕ ಸ್ಟ್ರೈಕ್ರೇಟ್ ಹೊಂದಿರುವ ಆಟಗಾರನಿಗೆ ನೀಡುವ ‘ಟಾಟಾ ಸಿಯಾರ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್’ ಪ್ರಶಸ್ತಿಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡರು. ಅವರು, 237.31ರ ಅದ್ಭುತ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ತಂಡಕ್ಕಾಗಿ ಅತ್ಯುತ್ತಮ
ಪ್ರದರ್ಶನ ನೀಡಿದ ಆಟಗಾರನಿಗೆ ನೀಡುವ ‘ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಆಫ್ ದಿ ಸೀಸನ್’ ಪ್ರಶಸ್ತಿಯನ್ನು ಕೂಡ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
‘ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್’ ಐಪಿಎಲ್ನಲ್ಲಿ ಅತ್ಯಂತ ಭರವಸೆಯ ಯುವ ಪ್ರತಿಭೆಯನ್ನು ಗುರುತಿಸಲು ನೀಡಲಾಗುವ ಈ ಪ್ರಶಸ್ತಿಯನ್ನು ಕೂಡ ವೈಭವ್ ಸೂರ್ಯವಂಶಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ, ಈ ಬಾರಿಯ ಐಪಿಎಲ್ನಲ್ಲಿ ಬಹುತೇಕ ಪ್ರಶಸ್ತಿಗಳನ್ನು ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ಗೆ ನೀಡುವ ಪರ್ಪಲ್ ಕ್ಯಾಪ್ ಗುಜರಾತ್ ತಂಡದ ಕಗಿಸೋ ರಬಾಡ ಪಡೆದುಕೊಂಡರೆ, ಅತೀ ಹೆಚ್ಚು ಡಾಟ್ ಬಾಲ್ ಎಸೆದ ಗ್ರೀನ್ ಡಾಟ್ಬಾಲ್ ಪ್ರಶಸ್ತಿ ಮಹಮ್ಮದ್ ಸಿರಾಜ್ ಅವರ ಪಾಲಾಯಿತು.














