ಅಹಮದಾಬಾದ್:ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ
ಹಾಲಿ ಚಾಂಪಿಯನ್ ಆರ್ಸಿಬಿ ಸತತ ಎರಡನೇ ಬಾರಿ ಕಪ್ ಎತ್ತಿದೆ.17 ವರ್ಷಗಳ ಕಪ್ ಬರಹವನ್ನು ನೀಗಿಸಿದ ಆರ್ಸಿಬಿ ಕಳೆದ ವರ್ಷ 18ನೇ ಆವೃತ್ತಿಯಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 19ನೇ ಆವೃತ್ತಿಯಲ್ಲಿಯಲ್ಲಿಯೂ ಆರ್ಸಿಬಿ ಕಪ್ ತಮ್ಮದಾಗಿಸಿದೆ.ಮುಂಬೈ ಮತ್ತು ಚೆನ್ನೈ ಬಳಿಕ ಸತತ ಐಪಿಎಲ್ ಕಪ್ ಎತ್ತಿದ ಸಾಧನೆಯನ್ನು ಆರ್ಸಿಬಿ ಮಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ, ಗುಜರಾತ್ ತಂಡ ರನ್ ಗಳಿಸಲು ಪರದಾಡುವಂತೆ ಮಾಡಿತು.ಬಳಿಕ ಬ್ಯಾಟಿಂಗ್ನಲ್ಲಿಯೂ ಕಮಾಲ್ ಮಾಡಿ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ
ಗುಜರಾತ್ ಟೈಟನ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಆರ್ಸಿಬಿ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ 5 ವಿಕೆಟ್ಗಳ ಗೆಲುವು ದಾಖಲಿಸಿ ಸಂಭ್ರಮಿಸಿತು. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಆಕರ್ಷಕ ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು. ಕೊಹ್ಲಿ 42 ಎಸೆತಗಳಲ್ಲಿ 9 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಗಳಿಸಿ ಗೆಲುವಿನ ರುವಾರಿಯಾದರು.ವಿರಾಟ್ ಕೊಹ್ಲಿ ಮತ್ತು

ವೆಂಕಟೇಶ್ ಅಯ್ಯರ್ ಸ್ಪೋಟಕ ಆರಂಭ ನೀಡಿದರು.ಇವರಿಬ್ಬರು 4.3 ಓವರ್ಗಳಲ್ಲಿ 62 ರನ್ ಬಾರಿಸಿದರು. ಈ ಹಂತದಲ್ಲಿ 16 ಎಸೆತಗಳಲ್ಲಿ 4 ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ 32 ರನ್ ಗಳಿಸಿದ ವೆಂಕಟೇಶ್ ಅಯ್ಯರ್ ಔಟ್ ಆದರು. ಬಳಿಕ ಬಂದ ದೇವದತ್ ಪಡಿಕಲ್(1), ರಜತ್ ಪಾಟಿದರ್(15), ಕ್ರುನಾಲ್ ಪಾಂಡ್ಯ(1) ಬೇಗನೇ ಔಟ್ ಆದರು. ರಶೀದ್ ಖಾನ್ ಒಂದೇ ಓವರ್ನಲ್ಲಿ ಎರಡು ವಿಕೆಟ್ ಉರುಳಿಸಿ ಆರ್ಸಿಬಿ ಪಾಳಯದಲ್ಲಿ ಆತಂಕ ಸೃಷ್ಠಿಸಿದರು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗು ಟಿಂ ಡೇವಿಡ್ ರಕ್ಷಣಾತ್ಮಕ ಆಟ ಆಡಿ ತಂಡವನ್ನು ಮುನ್ನಡೆಸಿದರು. ಈ ಹಂತದಲ್ಲಿ17 ಎಸೆತಗಳಲ್ಲಿ 3 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದ ಟಿಂ ಡೇವಿಡ್ ಔಟ್ ಆದರು. ಬಳಿಕ ಜಿತೇಶ್ ಶರ್ಮ(11) ಜೊತೆ ಸೇರಿ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಮೂರನೇ ಓವರ್ನಲ್ಲಿ ಶುಭಮನ್ ಗಿಲ್ (10) ವಿಕೆಟ್ ಕಳೆದುಕೊಂಡಿತು.ನಾಲ್ಕನೇ ಓವರ್ನಲ್ಲಿ ಸಾಯಿ ಸುದರ್ಶನ (12) ಭುವನೇಶ್ವರ ಕುಮಾರ್ಗೆ ವಿಕೆಟ್ ಕೊಟ್ಟು ಹೊರನಡೆದರು. ಪವರ್ ಪ್ಲೇ ಅಂತ್ಯಕ್ಕೆ 45ಕ್ಕೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.ನಿಶಾಂತ್ ಸಿಂಧು (20), ಜೋಸ್ ಬಟ್ಲರ್ (19), ಅರ್ಷದ್ ಖಾನ್ (15) ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರನಡೆದರು. ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಏಕಾಂಗಿಯಾಗಿ ಹೋರಾಟ ಮಾಡಿದ ವಾಷಿಂಗ್ಟನ್ ಸುಂದರ 37 ಎಸೆತದಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 50 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ಸಿಬಿ ಪರ ರಾಸಿಖ್ ಸಲಾಮ್ ದಾರ್ 37ಕ್ಕೆ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 29ಕ್ಕೆ 2, ಜೋಶ್ ಹ್ಯಾಜಲ್ವುಡ್ 37ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 23ಕ್ಕೆ 1 ವಿಕೆಟ್ ಪಡೆದರು.














