ಕ್ರೈಸ್ಟ್ಚರ್ಚ್:ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು. ಇಲ್ಲಿನ ಹ್ಯಾಗ್ಲಿ ಓವನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ
ನ್ಯೂಜಿಲೆಂಡ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. 181 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸಂಜು ಸ್ಯಾಮ್ಸನ್ (14), ಅಭಿಷೇಕ್ ಶರ್ಮಾ (27), ಇಶಾನ್ ಕಿಶನ್ ಬದಲು ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (4) ಮತ್ತು ನಾಯಕ ಶ್ರೇಯಸ್ ಅಯ್ಯರ್ (7) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 51 ರನ್ ಗಳಿಸಿದ ಉಪನಾಯಕ ತಿಲಕ್ ವರ್ಮಾ ತಂಡಕ್ಕೆ ಗೆಲುವಿನ ತಿಲಕವಿಟ್ಟರು.
ಕಳೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಗೆಲ್ಲಿಸಿದ್ದ ನಮನ್ ಧೀರ್ (31ರನ್, 17 ಎಸೆತ, 3ಸಿಕ್ಸರ್, 1 ಬೌಂಡರಿ) ಈ ಬಾರಿಯೂ ಸ್ಫೋಟಕ ಆಟವಾಡಿದರು. ಅವರು ಔಟ್ ಆದ ಬಳಿಕ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ (ಅಜೇಯ 26) ಮತ್ತು ತಿಲಕ್ ವರ್ಮಾ ಆಟದ ನೆರವಿನಿಂದ ಭಾರತ ತಂಡವು ಇನ್ನೂ ಒಂದು ಎಸೆತ ಬಾಕಿ ಇರುವಂತೆ 6 ವಿಕೆಟ್ ಕಳೆದುಕೊಂಡು ಗೆಲುವು ದಡ ಸೇರಿತು.
ನ್ಯೂಜಿಲೆಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್ 4 ವಿಕೆಟ್ ಪಡೆದು ಮಿಂಚಿದರು, ಜೇಕಬ್ ಡಫಿ ಮತ್ತು ನಾಥನ್ ಸ್ಮಿತ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಮೊದಲ 5.2 ಓವರ್ಗಳಲ್ಲಿ
41 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಗ್ಲೆನ್ ಫಿಲಿಪ್ಸ್ (70) ಮತ್ತು ಬೆವೋನ್ ಜೇಕಬ್ಸ್ (58) 116 ರನ್ಗಳ ಜೊತೆಯಾಟ ಆಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.ಅಂತಿಮವಾಗಿ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತು.
ಭಾರತದ ಪರ ಅರ್ಶದೀಪ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಪ್ರಿನ್ಸ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.









