ನವದೆಹಲಿ:‘ಅರ್ನಬ್’ ಚಂಡಮಾರುತದ ಬೆನ್ನಲ್ಲೇ ‘ಮುರಾಸು’ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಮಂಗಳವಾರ ಮುಂಜಾನೆ ವೇಳೆಗೆ ‘ಮುರಾಸು’ ತೀವ್ರ ಸ್ವರೂಪ ಪಡೆದು ಪೂರ್ವ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಭಾರತದ ಪೂರ್ವ ಕರಾವಳಿ ತೀರದ
ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.ಭಾರತದ ಆಗ್ನೇಯ ಕರಾವಳಿ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೇಲೆ ‘ಮುರಾಸು’ ಪರಿಣಾಮ ಬೀರಲಿದೆ ಎಂದು ಐಎಂಡಿ ಎಚ್ಚರಿಸಿದೆ. ಹಾಗಾಗಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಚಂಡಮಾರುತವು
ಚೆನ್ನೈನಿಂದ ಸುಮಾರು 250-260 ಕಿ.ಮೀ ದೂರದಲ್ಲಿದ್ದು, ಆಂಧ್ರಪ್ರದೇಶದ ದಕ್ಷಿಣ ಕರಾವಳಿಯತ್ತ ಧಾವಿಸುತ್ತಿದೆ.ದಕ್ಷಿಣ-ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ಸಕ್ರಿಯವಾಗಿರುವ ‘ಮುರಾಸು’ ಚಂಡಮಾರುತವು ಮತ್ತಷ್ಟು ತೀವ್ರಗೊಂಡು ಚಂಡಮಾರುತವಾಗಿ ಮಾರ್ಪಟ್ಟಿದೆ.ನವೆಂಬರ್ 3ರ ಮುಂಜಾನೆ ವೇಳೆ ಚಂಡಮಾರುತವು ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರ ನಡುವೆ ದಕ್ಷಿಣ ಕರಾವಳಿಯನ್ನು ದಾಟಲಿದೆ. ಈ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 100ರಿಂದ 110 ಕಿ.ಮೀ ಇರಲಿದ್ದು, ಗರಿಷ್ಠ 120 ಕಿ.ಮೀ ವೇಗವನ್ನು ತಲುಪುವ ಸಾಧ್ಯತೆಯಿದೆ’ ಎಂದು ಐಎಂಡಿ ಸ್ಪಷ್ಟಪಡಿಸಿದೆ. ಚಂಡಮಾರುತದ ಪರಿಣಾಮ ತಮುಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಸೇರು ರಾಜ್ಯಗಳಲ್ಲಿ ಮಳೆಯಾಗುವ ಸಂಭವ ಇದೆ.ಮುರಾಸು ಚಂಡಮಾರುತದ
ಪರಿಣಾಮವಾಗಿ ಮುಂದಿನ ಎರಡು ದಿನಗಳ ಕಾಲ ಕರ್ನಾಟಕ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.










