ನಗೋಯಾ: 2026ರ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಗುರುವಾರ ಒಂದೇ ದಿನ ಭಾರತ 7 ಚಿನ್ನ ಸೇರಿ ಒಟ್ಟು 26 ಪದಕ ಬಾಚಿಕೊಂಡಿತು. ಸದ್ಯ 21 ಚಿನ್ನ, 26 ಬೆಳ್ಳಿ, 41 ಕಂಚಿನೊಂದಿಗೆ ಒಟ್ಟು 88 ಪದಕ ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. 19 ವರ್ಷದ
ಆರ್ಚರಿ ಪಟು ಶೀತಲ್ ದೇವಿ ಕೇವಲ 2 ಗಂಟೆಗಳ ಅಂತರದಲ್ಲಿ 2 ಚಿನ್ನದ ಪದಕ ಗೆದ್ದರು. ಶೀತಲ್ ಮೊದಲು ತೋಮನ್ ಕುಮಾರ್ ಜೊತೆ ಸೇರಿ ಕಾಂಪೌಂಡ್ ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದರು.ಬಳಿಕ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ಸಿಂಗಾಪುರದ ಅಲಿಂ ನುರ್ ವಿರುದ್ಧ 4 ಅಂಕಗಳ ಹಿನ್ನಡೆಯಿಂದ ಪುಟಿದೆದ್ದು 142-139 ಅಂಕಗಳಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಸತತ 2ನೇ ಬಾರಿ
ಪ್ಯಾರಾ ಏಷ್ಯಾಡ್ನಲ್ಲಿ ಸ್ವರ್ಣ ಸಾಧನೆ ಮಾಡಿದರು. ಮಹಿಳೆಯರ ತಂಡ ವಿಭಾಗದಲ್ಲಿ ಶೀತಲ್ ಬೆಳ್ಳಿ ಜಯಿಸಿದರು. ಕೂಟದಲ್ಲಿ ಒಟ್ಟು 3 ಪದಕಗಳೊಂದಿಗೆ 19 ವರ್ಷದ ಆರ್ಚರ್ ಉತ್ತಮ ಸಾಧನೆ ಮಾಡಿದ್ದಾರೆ. ಮಹಿಳೆಯರ ಡಿಸ್ಕಸ್ ಥ್ರೋ ಎಫ್54 ವಿಭಾಗದಲ್ಲಿ ಸುವರ್ಣ ರಾಜ್ ಚಿನ್ನ ಗೆದ್ದರು. ಪುರುಷರ ಹೈಜಂಪ್ನಲ್ಲಿ ಶೈಲೇಶ್ ಕುಮಾರ್ ಚಿನ್ನ ಗೆದ್ದರೆ, ವರುಣ್ ಭಾಟಿ ಹಾಗೂ ರಾಹುಲ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.ಪುರುಷರ ಟಿ47 ವಿಭಾಗದ 400 ಮೀ. ಓಟದಲ್ಲಿ ದಿಲೀಪ್ ಗವಿತ್ ಹಾಗೂ ಮಹಿಳೆಯರ 400 ಮೀ. ಓಟದಲ್ಲಿ ಅಂಜನಾಬೆನ್ ಚಿನ್ನಕ್ಕೆ ಕೊರಳ್ಳೊಡ್ಡಿದರು.
ಧರ್ಮರಾಜ್ ಸೊಲೈರಾಜ್ ಪುರುಷರ ಲಾಂಗ್ಜಂಪ್ಜಲ್ಲಿ 7.15 ಮೀ. ದೂರಕ್ಕೆ ಹಾರಿ ಏಷ್ಯನ್ ದಾಖಲೆಯೊಂದಿಗೆ ಚಿನ್ನ ಜಯಿಸುವ ಮೂಲಕ ಭಾರತ, ಗುರುವಾರದ ಸ್ಪರ್ಧೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು. ಪ್ಯಾರಾ ಅಥ್ಲೆಟಿಕ್ಸ್ನಲ್ಲೇ ಭಾರತ 18 ಚಿನ್ನ, 16 ಬೆಳ್ಳಿ, 18 ಕಂಚು ಗೆದ್ದಿದೆ. ದೇಶಕ್ಕೆ ಸಿಕ್ಕಿರುವ 88 ಪದಕಗಳ ಪೈಕಿ 52 ಪದಕ ಪ್ಯಾರಾ ಅಥ್ಲೆಟಿಕ್ಸ್ನಿಂದಲೇ ಬಂದಿದೆ. ಈಜು, ಬ್ಯಾಡ್ಮಿಂಟನ್, ಶೂಟಿಂಗ್ನಲ್ಲೂ ಭಾರತ ಉತ್ತಮ ಪ್ರದರ್ಶನ ತೋರಿದೆ.









