ಕ್ರೈಸ್ಟ್ಚರ್ಚ್: ಸಂಜು ಸ್ಯಾಮ್ಸನ್ ಮತ್ತು ನಮನ್ ಧೀರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದೆ.ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ
226 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 6 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿದೆ.
ಭಾರತ ಕ್ರಿಕೆಟ್ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ತನ್ನ ಅತೀ ದೊಡ್ಡ ಗುರಿ ಬೆನ್ನಟ್ಟಿದ ಸಾಧನೆ ಮಾಡಿದೆ. ಇದಕ್ಕೂ ಮೊದಲು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ಮತ್ತು 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೂಡ ಇಷ್ಟೇ ಮೊತ್ತದ ಗುರಿ ಬೆನ್ನಟ್ಟಿ ಗೆಲುವು ದಾಖಲಿಸಿತ್ತು.ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ (29 ರನ್, 12 ಎಸೆತ), ಸಂಜು ಸ್ಯಾಮ್ಸನ್ (67 ರನ್, 33 ಎಸೆತ) ಉತ್ತಮ ಆರಂಭ ಒದಗಿಸಿದರು. ನಂತರ ಬಂದ ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಬೇಗನೆ ವಿಕೆಟ್ ಒಪ್ಪಿಸಿದರು.ಮಧ್ಯಮ ಕ್ರಮಾಂಕದಲ್ಲಿ
ನಾಯಕ ಶ್ರೇಯಸ್ ಅಯ್ಯರ್ (42 ರನ್ 28ಎ), ಅಕ್ಷರ್ ಪಟೇಲ್ (24 ರನ್) ಹಾಗೂ ನಮನ್ ಧೀರ್ (ಅಜೇಯ 42, 15ಎ) ಸ್ಫೋಟಕ ಆಟದ ನೆರವಿನಿಂದ ಭಾರತ ತಂಡವು ಸುಲಭದ ಗೆಲುವು ದಾಖಲಿಸಿತು. ಆ ಮೂಲಕ ಐದು ಪಂದ್ಯಗಳ ಸರಣಿಯನ್ನು 1–0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಸಂಜು 33 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರೆ, ನಮನ್ ದೀರ್ 15 ಎಸೆತಗಳಲ್ಲಿ 5 ಬೌಂಡರಿ, 2ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಸಿಡಿಸಿದರು.
ನ್ಯೂಜಿಲೆಂಡ್ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಹಾಗೂ ಮಿಚೆಲ್ ಬ್ರೇಸ್ವೆಲ್ ತಲಾ ಎರಡು ವಿಕೆಟ್ ಪಡೆದರೆ, ಲೂಕಿ ಫರ್ಗ್ಯೂಸರ್ ಮತ್ತು ಆ್ಯಡಂ ಮಿಲ್ನೆ ಒಂದೊಂದು ವಿಕೆಟ್ ಪಡೆದುಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕರಾದ ಟಿಮ್ ಸೈಫರ್ಟ್ (24 ರನ್) ಮತ್ತು ಫಿನ್ ಅಲೆನ್ (45 ರನ್) ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 49 ರನ್ ಕಲೆಹಾಕಿತು.ನಂತರ ಬಂದ ಡ್ಯಾರಿಲ್ ಮಿಚೆಲ್ (28), ಬೆವೊನ್ ಜಾಕೋಬ್ಸ್ (31) ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಗ್ಲೆನ್ ಫಿಲಿಪ್ಸ್ ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ ಅಜೇಯ 82 ರನ್ ಸಿಡಿಸಿ ತಂಡದ ಮೊತ್ತವನ್ನು 225 ಆಗುವಂತೆ ನೋಡಿಕೊಂಡರು.ಭಾರತದ ಪರ ಮಯಾಂಕ್ ಯಾದವ್, ಅಕ್ಷರ್ ಪಟೇಲ್ ಮತ್ತು ಅರ್ಶದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.








