ಸುಳ್ಯ:ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೋಳಿ ಅವರನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ ಅಭಿವೃದ್ಧಿಗೆ ಮನವಿ ಸಲ್ಲಿಸಿದರು.ದಕ್ಷಿಣ ಕನ್ನಡ-ಕೊಡಗು ಸಂಪರ್ಕಿಸುವ ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆಯನ್ನು ವೀಕ್ಷಣೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸೆ.26ರಂದು
ಸುಳ್ಯಕ್ಕೆ ಭೇಟಿ ನೀಡಿ ಮೈತಡ್ಕ-ಪಂಜಿಕಲ್ಲು ಸೇತುವೆ ಮತ್ತು ತೊಡಿಕಾನ-ಪಟ್ಟಿ- ಭಾಗಮಂಡಲ ರಸ್ತೆಯನ್ನು ವೀಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.ಸುಳ್ಯ ವಿಧಾನ ಸಭಾ ಕ್ಷೇತ್ರದ ತೊಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ಅಭಿವೃದ್ದಿ ಮತ್ತು ಅರಂತೋಡು-ಮರ್ಕಂಜ- ಎಲಿಮಲೆ ರಸ್ತೆಗೆ ಅನುದಾನ ಬಿಡುಗಡೆಗೆ ಹಾಗೂ ಕ್ಷೇತ್ರದ ಲೋಕೋಪಯೋಗಿ ರಸ್ತೆಗಳ ಅಭಿವೃದ್ಧಿ ಮತ್ತು ವಿವಿಧ ಸೇತುವೆಗಳ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಸಚಿವರು ಸುಳ್ಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ ಕಂಜಿಪಿಲಿ, ಅರಂತೋಡು-ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸದಾನಂದ ಕುಂಟ್ಯಾನ, ಸುರೇಶ ಕುಂಡಡ್ಕ ಮತ್ತಿತರರು ಉಪಸ್ಥಿತರಿದ್ದರು.







