ಸುಳ್ಯ:ಕನ್ನಡ ಕಲಿಕೆಯು ಕೇವಲ ಅಂಕ ಗಳಿಸಲು ಮಾತ್ರ ಸೀಮಿತವಾಗಿರದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಜೀವನದ ಭಾಗವಾಗಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಸುಳ್ಯ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕನ್ನಡವು ಜೀವನದ ಭಾಗವಾದಾಗ ಜೀವನ ಇನ್ನಷ್ಟು ಸುಂದರವಾಗುತ್ತದೆ. ಆದರೆ ಇಂದು ಕನ್ನಡಕ್ಕೆ, ಕನ್ನಡ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದೇ ಇರುವ ಸ್ಥಿತಿ ಕಂಡು ಬಂದಿದೆ, ಆದುದರಿಂದಲೇ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದೆ. ಅದು ಬದಲಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು ಎಂದು ಅವರು ಹೇಳಿದರು.ಸುಳ್ಯ ತಹಶೀಲ್ದಾರ್ ಮಂಜುಳ ಎಂ. ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ, ರಾಜ್ಯೋತ್ಸವ ಸಂದೇಶ

ನೀಡಿದರು. ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ.ಎಸ್ ಗಂಗಾಧರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಫ,
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಸ್ ಹರಗಿ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್ ಹೆಚ್ ಆರ್ , ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ವಂದಿಸಿದರು.ಮಮತ ಕೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ನಡೆದ ಆಕರ್ಷಕ ಪಥ ಸಂಕಲನದಲ್ಲಿ ಆರಕ್ಷಕ ಸಿಬ್ಬಂದಿಗಳು, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ & ಗೈಡ್ಸ್, ಬುಲ್ ಬುಲ್ಸ್, ತಂಡಗಳು ಹಾಗು ಮಕ್ಕಳು ಭಾಗವಹಿಸಿದರು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪ್ರದೀಪ್ ಕೆಂಚನೂರು ಅವರನ್ನು ಸನ್ಮಾನಿಸಲಾಯಿತು.









