ಶ್ರೀಹರಿಕೋಟ: ಭಾರತದ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆ ‘NaviC’ ಅನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎರಡನೇ ತಲೆಮಾರಿನ NVS ಸರಣಿಯ ಮೂರನೇ ಉಪಗ್ರಹ NVS-03 ಅನ್ನು ಶುಕ್ರವಾರ ರಾತ್ರಿ
ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾತ್ರಿ 11.51ಕ್ಕೆ ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV-F18) ರಾಕೆಟ್ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿತು. ಭಾರತ ಅಭಿವೃದ್ಧಿಪಡಿಸಿರುವ ‘NaviC’ ಜಾಲವನ್ನು ಪುನಶ್ಚತನಗೊಳಿಸುವುದು, ಅದರ ಸಾಮರ್ಥ್ಯ ಹೆಚ್ಚಿಸುವುದು ಮತ್ತು ವಿಶ್ವಾಸಾರ್ಹತೆಯನ್ನು ವೃದ್ಧಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಉಪಗ್ರಹವನ್ನು ಉದ್ದೇಶಿತ ದೀರ್ಘವೃತ್ತಾಕಾರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಘೋಷಿಸಿದರು.ಉಪಗ್ರಹದ ಯಶಸ್ವಿ ಉಡಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.









