*ಗಣೇಶ್ ಮಾವಂಜಿ.
ನಾಲ್ಕು ಜನ ಸೇರಿರುವಲ್ಲಿ ಎದ್ದು ನಿಂತು ಮಾತನಾಡಲು ಸ್ವರ ಬಾರದ ಮಹಿಳೆಯರು ಇತ್ತೀಚೆಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತ್ರ ಮುಖಕ್ಕೆ ಬಣ್ಣ ಬಳಿದು ಒಂದೆರಡು ಸಲ ವೇದಿಕೆ ಏರಿದವರು ಹಲವು ವರ್ಷಗಳ ಬಳಿಕ ಮತ್ತೆ ವೇದಿಕೆ ಏರಿ ತಮ್ಮ ಮಕ್ಕಳೆದುರು ತಮ್ಮ ಪ್ರತಿಭೆ ಪ್ರದರ್ಶಿಸಿ ಭೇಷ್ ಅನಿಸಿಕೊಳ್ಳುತ್ತಿದ್ದಾರೆ. ತನಗೇನಾದರೂ ಬೇಕಾದಲ್ಲಿ
ಹೆಜ್ಜೆಹೆಜ್ಜೆಗೂ ಗಂಡ ಅಥವಾ ಮಕ್ಕಳ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇತ್ತೀಚೆಗೆ ಮಹಿಳೆಯರಿಗೆ ಇಲ್ಲದಂತಾಗಿದೆ. ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಸಂಬಂಧಿಕರ ಮನೆಗೆ ಅದರಲ್ಲೂ ಗಂಡನೊಂದಿಗೆ ಅಥವಾ ಮಕ್ಕಳೊಂದಿಗೆ ಮಾತ್ರ ತೆರಳುತ್ತಿದ್ದ ಮಹಿಳೆಯರು ಇದೀಗ ಊರಿನ ಸಾರ್ವಜನಿಕ ಸಮಾರಂಭದಲ್ಲಿ ಒಗ್ಗೂಡಿ ಪಾಲ್ಗೊಳ್ಳಲು ಅಥವಾ ವೇದಿಕೆ ಏರಿ ಏನಾದರೂ ಕಾರ್ಯಕ್ರಮ ನೀಡುವಷ್ಟು ಮುಂದುವರಿದಿದ್ದಾರೆ. ಅಲ್ಲದೆ ಜ್ಞಾನ ವೃದ್ಧಿಗಾಗಿ, ಮನರಂಜನೆಗಾಗಿ ವಾರಾಂತ್ಯದಲ್ಲೋ ಅಥವಾ ಯಾವುದಾದರೂ ವಿಶೇಷ ದಿನಗಳಲ್ಲಿ ಪ್ರವಾಸ ಕೈಗೊಂಡು ಏಕತಾನತೆಯಿಂದ ಹೊರಬರುವ ದಾರಿಯನ್ನೂ ಕಂಡುಕೊಂಡಿದ್ದಾರೆ.
ಇದಕ್ಕೆಲ್ಲಾ ಕಾರಣ ಗ್ರಾಮ ಮಟ್ಟದಲ್ಲಿ ಕಾರ್ಯವೆಸಗುತ್ತಿರುವ ಮಹಿಳಾ ಸ್ವ ಸಹಾಯ ಸಂಘಗಳು. ಈ ಸ್ವ ಸಹಾಯ ಸಂಘಗಳು ಕೇವಲ ಮಹಿಳೆಯರ ಆರ್ಥಿಕ ಅನುಕೂಲತೆಗಾಗಿ ಉದಯಿಸಿರುವ ವ್ಯವಸ್ಥೆಯಲ್ಲ.,ಬದಲಾಗಿ ಮಹಿಳೆಯರನ್ನು ಎಲ್ಲಾ ರಂಗಗಳಲ್ಲೂ ಮಿಂಚಲು ದಾರಿದೀಪವಾಗುತ್ತಿದೆ.
ನಾಲ್ಕು ಗೋಡೆಗಳ ಮಧ್ಯೆ ಹೊಗೆ ನುಂಗುತ್ತಾ ‘ಬಂದದ್ದೆಲ್ಲಾ ಬರಲಿ..,ಗೋವಿಂದನ ದಯೆಯೊಂದಿರಲಿ’ ಎಂದು ದೀನಳಾಗಿ ಕೈಮುಗಿದು ಎಲ್ಲಾ ನೋವನ್ನೂ ಅವುಡುಗಚ್ಚಿ ಸಹಿಸುವ ಮಹಿಳೆಯ ಪರಿಸ್ಥಿತಿ ಆಧುನಿಕ ಜಗತ್ತಿನಲ್ಲಿ ಸಾಕಷ್ಟು ಬದಲಾಗಿದೆ. ‘ಹೆಣ್ಣು ಸಂಸಾರದ ಕಣ್ಣು’ ಎಂದು ಸ್ತ್ರೀಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬುದಕ್ಕಾಗಿಯೇ ಸೃಜಿಸಲ್ಪಟ್ಟ ಈ ಮಾತು ಅನಾದಿಕಾಲದಿಂದಲೂ ಇದ್ದರೂ ಹೆಣ್ಣನ್ನು ದಮನಿಸುವ ಪ್ರಕ್ರಿಯೆಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಲೇ ಬಂದಿದೆ. ಇದನ್ನು ತಡೆಯಲು ಕಾನೂನಿನ ಬಲ ಇದ್ದರೂ ಕೂಡಾ ಮಹಿಳೆಯರಿಗೆ ಅತೀ ಹೆಚ್ಚು ಧೈರ್ಯ ಹಾಗೂ ಆತ್ಮ ಸ್ಥೈರ್ಯ ತಂದುಕೊಟ್ಟಿರುವುದು ಮಾತ್ರ ಮಹಿಳಾ ಸ್ವಸಹಾಯ ಸಂಘಗಳು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ.
ಅಷ್ಟು ಮಾತ್ರವಲ್ಲ. ಹೆಸರೇ ತಿಳಿಸುವಂತೆ ಮಹಿಳಾ ಸ್ವಸಹಾಯ ಸಂಘಗಗಳ ಮುಖಾಂತರ ಸಾಲ ಪಡೆದು ಸ್ವ-ಸಹಾಯ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳೂ ದಶಕಗಳಿಂದೀಚೆ ಆಗುತ್ತಿದೆ. ಮಕ್ಕಳ ಮದುವೆಗಾಗಿ ವ್ಯಯಿಸುವ ಖರ್ಚಿಗೆ, ಚಿನ್ನ ಖರೀದಿಸಲಿಲ್ಲವಲ್ಲಾ ಎಂಬ ತಲೆ ನೋವಿಗೆ, ಪಕ್ಕದ ಮನೆಯವರಲ್ಲಿ ಫ್ರಿಟ್ಜ್, ವಾಶಿಂಗ್ ಮೆಷಿನ್ ಇಲ್ಲ ಎಂಬೆಲ್ಲಾ ಕೊರಗಿಗೆ ಸ್ವ ಸಹಾಯ ಸಂಘಗಗಳು ಲೋನ್ ಕೊಡಿಸಿ ಅವರ ಮನಸ್ಸಿಗೆ ಸಮಾಧಾನ ತಂದುಕೊಟ್ಟಿದೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸಾಲ ಮರುಪಾವತಿಸಲು ಬೇಕಾದ ಆರ್ಥಿಕ ಸ್ವಾವಲಂಬನೆಗೂ ಇದೇ ಸ್ವಸಹಾಯ ಸಂಘಗಳು ದಾರಿ ಮಾಡಿಕೊಟ್ಟಿವೆ.
ಎಷ್ಟೋ ಕಡೆಗಳಲ್ಲಿ ಮಹಿಳೆಯರು ಜಾನುವಾರು ಖರೀದಿಸಿ ಹೈನುಗಾರಿಕೆ ನಡೆಸಲು ಇದೇ ಸಂಘಗಳು ಸಹಾಯ ಮಾಡಿವೆ. ಹೊಲಿಗೆ ಯಂತ್ರ ಖರೀದಿಸಿ ಹೊಲಿಗೆ ವೃತ್ತಿಯ ಮುಖಾಂತರವೇ ತನಗೇನೂ ಇಲ್ಲ ಎಂಬ ಕೊರಗಿಗೆ ಇದೇ ಸ್ವಸಹಾಯ ಗುಂಪುಗಳು ಮದ್ದರೆದಿದೆ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮುಂತಾದ ಮಹಿಳೆಯರ ಸಣ್ಣ ಉದ್ಯಮದ ದಾರಿಗೂ ಈ ಸಂಘಗಳು ಬೆಳಕು ತೋರಿವೆ. ಆ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಪ್ರೇರಣಾ ಶಕ್ತಿಯಾಗಿವೆ.
ಯಾವುದೇ ಊರಿನಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ರಾಷ್ಟ್ರೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಆಯೋಜಿಸಲಾಗುವ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಆ ಊರಿನವರೇ ಭಾಗವಹಿಸುವುದು ಸರ್ವೇ ಸಾಮಾನ್ಯ. ಆದರೆ ಮಹಿಳಾ ಸ್ವಸಹಾಯ ಸಂಘಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮೊದಲು ವಿದ್ಯಾವಂತ ಮಹಿಳೆಯರು ಮಾತ್ರ ಆ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಉಳಿದಂತೆ ಗೃಹಿಣಿಯರು, ಯಾವುದೋ ಕಾರಣಕ್ಕೆ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಜವಾಬ್ದಾರಿ ಹೆಗಲೇರಿಸಿಕೊಂಡವರು ಅಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರಾದರೂ ಸ್ಪರ್ಧೆಯಲ್ಲಿ ಭಾಗವಹಿಸುವುದು ತೀರಾ ಅಪರೂಪವಾಗಿರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಯಾವುದೇ ಕಾರ್ಯಕ್ರಮಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರು ಸಮವಸ್ತ್ರ ಧರಿಸಿ ಅಥವಾ ಗುಂಪಾಗಿ ಕಾಣಿಸಿಕೊಂಡು ಕಾರ್ಯಕ್ರಮಕ್ಕೆ ಕಳೆ ಏರಿಸುವುದು ಈಗ ಪಕ್ಕಾ ಎಂಬಂತಾಗಿದೆ.
ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದೇನೋ ಎಂಬ ಸಂಶಯ ಅಯೋಜಕರಿಗೆ ಕಾಡಿದರಂತೂ ಮಹಿಳಾ ಸ್ವಸಹಾಯ ಸಂಘಗಗಳ ಪ್ರಮುಖರಿಗೆ ಕರೆ ಹೋಗುತ್ತದೆ. ನಿಮ್ಮ ಸಂಘದವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ದುಂಬಾಲು ಬೀಳುವುದೂ ಇಲ್ಲದಿಲ್ಲ. ಅಷ್ಟರಮಟ್ಟಿಗೆ ಮಹಿಳಾ ಸ್ವಸಹಾಯ ಸಂಘಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.
ಈ ನಡುವೆ ಮಹಿಳೆಯರು ಒಂದೆಡೆ ಕಲೆತಾಗ ಉಂಟಾಗುವ ಪರಸ್ಪರ ಭಿನ್ನಾಭಿಪ್ರಾಯ, ಮಾತಿನ ಬಿರುಸು ಬಾಣಗಳು, ಪರಿಣಾಮವಾಗಿ ತಲೆದೋರುವ ಗುಂಪುಗಾರಿಕೆ, ಪರಸ್ಪರ ಮುನಿಸು ಇವೆಲ್ಲಾ ಸರ್ವೇ ಸಾಮಾನ್ಯ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರು ಕೂಡಾ ಒಂದೆಡೆ ಸೇರಿದಾಗ ಪರಸ್ಪರ ಕಾಲೆಳೆದಾಟ, ಭಿನ್ನಾಭಿಪ್ರಾಯ ಮೊದಲಾದವುಗಳೆಲ್ಲಾ ಸಾಮಾನ್ಯ. ಇದಕ್ಕೆ ಲಿಂಗ ಭೇದವಿಲ್ಲ. ಹಾಗಿದ್ದರೂ ಮಹಿಳಾ ಸ್ವಸಹಾಯ ಸಂಘಗಳೆಂಬ ಈ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಮನೆಯ ನಾಲ್ಕು ಗೋಡೆಗಳಿಂದಾಚೆ ಎಳೆದು ತಂದಿದೆ. ಅವರಿಗೆ ಏನೂ ಗೊತ್ತಿಲ್ಲ ಎಂಬ ಜನಾಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಅವರಿಗೆ ಗೊತ್ತಿಲ್ಲದ್ದು ಏನೂ ಇಲ್ಲ ಎಂಬ ಭಾವ ಜನರ ಮನಸ್ಸಿನಲ್ಲಿ ಉದಿಸುವಂತೆ ಮಾಡಿದೆ.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಬ್ಯಾಂಕ್ ವ್ಯವಹಾರ, ಸಭೆ ನಡೆಸುವಿಕೆ, ಲೆಕ್ಕಪತ್ರ ನಿರ್ವಹಣೆ, ಸಂದರ್ಭಕ್ಕನುಗುಣವಾಗಿ ನಿರ್ಧಾರ ಕೈಗೊಳ್ಳುವಿಕೆ ಮುಂತಾದ ಕೌಶಲಗಳನ್ನು ಕಲಿಯುತ್ತಿದ್ದಾರೆ. ಇದು ಮಹಿಳಾ ನಾಯಕತ್ವದ ಬೆಳವಣಿಗೆಯ ಪ್ರಮುಖ ಅಂಶ ಎಂಬುದನ್ನು ಉಲ್ಲೇಖಿಸಲೇ ಬೇಕು.
ಒಟ್ಟಿನಲ್ಲಿ ಸ್ವಸಹಾಯ ಸಂಘಗಳು ಮಹಿಳೆಯರಿಗೆ ಕೇವಲ ಆರ್ಥಿಕ ನೆರವು ನೀಡುವ ಸಂಸ್ಥೆಗಳಾಗಿ ಉಳಿದಿಲ್ಲ. ಬದಲಾಗಿ ಅವರಲ್ಲಿ ಅಡಗಿರುವ ಪ್ರತಿಭೆ, ಸಾಮರ್ಥ್ಯ ಮತ್ತು ನಾಯಕತ್ವದ ಗುಣಗಳನ್ನು ಹೊರತರುವ ವೇದಿಕೆಗಳಾಗಿವೆ. ಮನೆಯ ಜವಾಬ್ದಾರಿಯ ನಡುವೆಯೂ ತಮ್ಮದೇ ಆದ ಅಸ್ತಿತ್ವ ರೂಪಿಸಿಕೊಳ್ಳಲು ಸಹಾಯಹಸ್ತ ಒದಗಿಸಿದೆ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)












