ಬೆಂಗಳೂರು: ಸರ್ಕಾರಿ ಸಾರಿಗೆ ಬಸ್ಗಳ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು ಅ.4 ಮಧ್ಯ ರಾತ್ರಿಯಿಂದ ಹೊಸ ದರ ಜಾರಿಯಾಗಲಿದೆ.ಟಿಕೆಟ್ ದರವನ್ನು ಬೆಂಗಳೂರು ಬಿಎಂಟಿಸಿಯಲ್ಲಿ ಶೇ 35ರಷ್ಟು ಹಾಗೂ ಕೆಎಸ್ಆರ್ಟಿಸಿ ಸಹಿತ ಉಳಿದ ನಿಗಮಗಳಲ್ಲಿ ಶೇ 23ರಷ್ಟು ಏರಿಕೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ
ಸಂಸ್ಥೆಯ ಬಸ್ ಪ್ರಯಾಣ ದರವನ್ನು 2014ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು 2020ರಲ್ಲಿ ಹೆಚ್ಚಳ ಮಾಡಲಾಗಿತ್ತು. ಆನಂತರ 2025ರ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಯಿತಾದರೂ ಅದರ ಪ್ರಮಾಣ ಶೇ 15ರಷ್ಟಿತ್ತು. ಒಂದು ವರ್ಷ ಹತ್ತು ತಿಂಗಳ ಒಳಗೆ ಮತ್ತೆ ಏರಿಕೆ ಮಾಡಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ದರ ಪರಿಷ್ಕರಣೆಯ ವಿವರ ನೀಡಿದರು.ಬಿಎಂಟಿಸಿ ಸಾಮಾನ್ಯ ಬಸ್ ಪ್ರಯಾಣ ದರದಲ್ಲಿ 4ರಿಂದ 12ರವರೆಗೆ ಮತ್ತು ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯುಆರ್ಟಿಸಿ ಬಸ್ಗಳ ಪ್ರಯಾಣ ದರವನ್ನು 9ರಿಂದ 18ರವರೆಗೆ ಸ್ಟೇಜ್ಗಳಿಗೆ ಅನುಗುಣವಾಗಿ ಹೆಚ್ಚಳ ಮಾಡಲಾಗಿದೆ’ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿದೆ. ಪ್ರತಿ ಲೀಟರ್ಗೆ ಒಟ್ಟು 10.47 ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಆಗಿಂದಾಗ್ಗೆ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದರಿಂದ ಸಂಸ್ಥೆಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದು ಅವರು ಹೇಳಿದರು. ಡೀಸೆಲ್ ದರ ಜಾಸ್ತಿಯಾಗಿರುವುದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಯಿತು’ ಎಂದು ಸಮರ್ಥಿಸಿಕೊಂಡರು.























