ಕೋಲ್ಕತ್ತ: ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಟೆಸ್ಟ್ ಕ್ರಿಕೆಟ್ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಶಮಿ ಅವರು 64 ಟೆಸ್ಟ್ ಪಂದ್ಯಗಳಿಂದ 229 ವಿಕೆಟ್ಗಳನ್ನು ಗಳಿಸಿದ್ದಾರೆ.2025ರ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತ ತಂಡದಿಂದ ಹೊರಗುಳಿದಿರುವ ಶಮಿ ಅವರು
ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಜೊತೆಗೆ ಸೀಮಿತ ಓವರ್ಗಳ ಮಾದರಿಯ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.ನಾನು ಬಿಳಿ ಜರ್ಸಿಯನ್ನು ತೊರೆಯುತ್ತಿದ್ದೇನೆ. ಆದರೆ ಅದಕ್ಕೆ ಸಂಬಂಧಿಸಿದ ನೆನಪುಗಳನ್ನಲ್ಲ. ನಾನು ಮೊದಲ ಬಾರಿಗೆ ಟೆಸ್ಟ್ ಜರ್ಸಿ ಧರಿಸಿದಾಗ ನನ್ನ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಕನಸಿತ್ತು. 12 ವರ್ಷಗಳ ಟೆಸ್ಟ್ ವೃತ್ತಿಜೀವನವು ಸಾಕಷ್ಟು ಪಾಠಗಳನ್ನು ಕಲಿಸಿದೆ’ ಎಂದು ಶಮಿ ಬರೆದುಕೊಂಡಿದ್ದಾರೆ.‘ಟೆಸ್ಟ್ ಕ್ರಿಕೆಟ್ ನನಗೆ ಬರೀ ಒಂದು ಮಾದರಿಯಷ್ಟೇ ಅಲ್ಲ; ಅದು ನನ್ನ ಜೀವನದ ಅತ್ಯಂತ ವಿಶೇಷವಾದ ಭಾಗ. ಇಂದು ನಾನು ಭಾರವಾದ ಹೃದಯ ಮತ್ತು ಸುಂದರ ನೆನಪುಗಳೊಂದಿಗೆ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.ಉತ್ತರಪ್ರದೇಶದ ಶಮಿ ಅವರು 2013ರ ನವೆಂಬರ್ 6ರಂದು
ಈಡನ್ ಗಾರ್ಡನ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆರು ಬಾರಿ ಐದು ವಿಕೆಟ್ ಸಾಧನೆ ಸೇರಿದಂತೆ 27.71 ಸರಾಸರಿಯಲ್ಲಿ ಒಟ್ಟು 229 ವಿಕೆಟ್ಗಳನ್ನು ಕಬಳಿಸಿದ್ದಾರೆ.ಟೆಸ್ಟ್ ಕ್ರಿಕೆಟ್ನಲ್ಲಿ ಕಪಿಲ್ ದೇವ್ (434), ಜಹೀರ್ ಖಾನ್, ಇಶಾಂತ್ ಶರ್ಮಾ (ತಲಾ 311), ಜಾವಗಲ್ ಶ್ರೀನಾಥ್ (236) ಮತ್ತು ಜಸ್ಪ್ರೀತ್ ಬೂಮ್ರಾ (234) ನಂತರ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆರನೇ ವೇಗದ ಬೌಲರ್ ಶಮಿ ಆಗಿದ್ದಾರೆ.2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಜೊಹಾನೆಸ್ಬರ್ಗ್ನಲ್ಲಿ ನಡೆದ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 28 ರನ್ನಿಗೆ 5 ವಿಕೆಟ್ ಕಲೆಹಾಕಿ, ಭಾರತದ ಗೆಲುವಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 2023ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಶಮಿ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.






























