ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ 4 ವಿಕೆಟ್ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.ಕೊನೆಯ ಏಳು ಪಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದ ಕೆಕೆಆರ್ ಪಡೆ ಪ್ಲೇಆಫ್ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿತು.ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ
ಕೋಲ್ಕತ್ತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೌರಭ್ (34ಕ್ಕೆ2), ಗ್ರೀನ್ (23ಕ್ಕೆ2) ಹಾಗೂ ಸುನಿಲ್ ನಾರಾಯಣ್ (13ಕ್ಕೆ1) ಅವರು ಮುಂಬೈ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ ಹಾರ್ದಿಕ್ ಪಾಂಡ್ಯ ಪಡೆ 15.2 ಓವರ್ಗಳಲ್ಲಿ 95 ರನ್ಗಳಿಗೇ 6 ವಿಕೆಟ್ ಕಳೆದುಕೊಂಡಿತ್ತು.
ಕೊನೆಯ ಹಂತದ ಓವರ್ಗಳಲ್ಲಿ ಕಾರ್ಬಿನ್ ಬಾಷ್ (32; 18ಎ, 4×2, 6×2) ಬೀಸಾಟವಾಡಿದರು. ಹೀಗಾಗಿ, ಮುಂಬೈ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 147 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತ ತಂಡಕ್ಕೆ ಮನೀಷ್ ಪಾಂಡೆ (45; 33ಎ, 4×6) ಹಾಗೂ ರೋಹ್ಮನ್ ಪಾವೆಲ್ (40; 30ಎ, 4×2, 6×2) ನಾಲ್ಕನೇ ವಿಕೆಟ್ಗೆ 64 ರನ್ ಸೇರಿಸಿ ಆಸರೆಯಾದರು. ಕೆಕೆಆರ್ ತಂಡವು 18.5 ಓವರ್ಗಳಲ್ಲಿ 6 ವಿಕೆಟ್ಗೆ 148 ರನ್ ಗಳಿಸಿ ಸಂಭ್ರಮಿಸಿತು. ಇದಕ್ಕೂ ಮೊದಲು, ಮುಂಬೈ ತಂಡದ ರೋಹಿತ್ ಶರ್ಮಾ (15; 13ಎ, 6×2), ಸೂರ್ಯಕುಮಾರ್ ಯಾದವ್ (15; 6ಎ), ತಿಲಕ್ ವರ್ಮಾ (20; 32ಎ, 6×1) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (26; 27ಎ, 4×2, 6×1) ರನ್ ಗಳಿಸಿದರು. ಕೊನೆಯಲ್ಲಿ ಬಾಷ್ ಮತ್ತು ಚಾಹರ್ ಚೇತರಿಕೆ ನೀಡಿದರು.
ಮಳೆ ಬಂದಿದ್ದರಿಂದ ಸ್ವಲ್ಪ ಹೊತ್ತು ಪಂದ್ಯ ಸ್ಥಗಿತವಾಗಿತ್ತು.













