ಟೊರೊಂಟೊ: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಗೊಂಕಲೊ ರಾಮೋಸ್ ಅವರ ಆಟದ ಬಲದಿಂದ ಪೋರ್ಚುಗಲ್ ತಂಡವು ಫಿಫಾ ವಿಶ್ವಕಪ್ 2026 ಟೂರ್ನಿಯ ಪಂದ್ಯದಲ್ಲಿ ಕ್ರೊವೇಷ್ಯಾವನ್ನು ಮಣಿಸಿ ‘ಸೂಪರ್–16’ ಹಂತಕ್ಕೇರಿದೆ.ಪಂದ್ಯದ ಮೊದಲಾರ್ಧವು ಗೋಲು ರಹಿತವಾಗಿ ಮುಕ್ತಾಯವಾಯಿತು. ದ್ವಿತೀಯಾರ್ಧದ
53ನೇ ನಿಮಿಷದಲ್ಲಿ ಕ್ರೊವೇಷ್ಯಾದ ಇವಾನ್ ಪೆರಿಸಿಕ್ ಮೊದಲ ಗೋಲು ಬಾರಿಸಿದರು. ನಂತರ, 68ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನ ಬಳಸಿಕೊಂಡ ರೊನಾಲ್ಡೊ, ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು. ಇದರೊಂದಿಗೆ, ಹೋರಾಟವೂ ಸಮಬಲಗೊಂಡಿತು.
ಅಂತಿಮ ಹಂತದವರೆಗೂ ಎರಡೂ ತಂಡಗಳು ಇನ್ನೊಂದು ಗೋಲು ಬಿಟ್ಟುಕೊಡದೆ ಜಿದ್ದಾಜಿದ್ದಿ ನಡೆಸಿದವು. ಹೀಗಾಗಿ, ಪಂದ್ಯ ಡ್ರಾ ಆಗುವತ್ತ ಸಾಗಿತ್ತು. ಆದರೆ, ಎರಡನೇ ಅವಧಿಯಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ರಾಮೋಸ್ 94ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರೊಂದಿಗೆ, ಪೋರ್ಚುಗಲ್ ಪಡೆ 2–1 ಅಂತರದ ಜಯ ಸಾಧಿಸಿ, ಮುಂದಿನ ಹಂತಕ್ಕೇರಿತು.
ಮತ್ತೊಂದು ಪಂದ್ಯದಲ್ಲಿ ಆಸ್ಟ್ರಿಯಾವನ್ನು ಮಣಿಸಿರುವ ಸ್ಪೇನ್ ‘ಸೂಪರ್ 16’ ಹಂತದ ಸೆಣಸಾಟದಲ್ಲಿ ಪೋರ್ಚುಗಲ್ಗೆ ಸವಾಲೊಡ್ಡಲಿದೆ.ಲಾಸ್ ಏಂಜಲೀಸ್ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ 3–0 ಅಂತರದಿಂದ ಆಸ್ಟ್ರಿಯಾವನ್ನು ಸೋಲಿಸಿದೆ. ಮೈಕೆಲ್ ಒಯಾರ್ಝಬಲ್ ಎರಡು ಗೋಲು ಗಳಿಸಿದರೆ, ಪೆದ್ರೊ ಪೊರೊ ಮತ್ತೊಂದು ಗೋಲು ಗಳಿಸಿದರು.








