ಮಿಯಾಮಿ: ಕೇಪ್ ವರ್ದೆ ತಂಡವನ್ನು 3 – 2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್–16’ ಹಂತಕ್ಕೆ ಪ್ರವೇಶಿಸಿತು.ಕೇಪ್ ವರ್ದೆ ಪಡೆ ಹಾಲಿ ಚಾಂಪಿಯನ್ನರ ಎದುರು ಛಲ ಬಿಡದೆ ಆಡಿತು. ನಿಗದಿತ ಸಮಯ ಹಾಗೂ ಹೆಚ್ಚುವರಿ ಅವಧಿಯಲ್ಲಿ ಸಮಬಲದ ಹೋರಾಟ ನಡೆಸಿತು. ಲಯೊನೆಲ್ ಮೆಸ್ಸಿ 29ನೇ ನಿಮಿಷದಲ್ಲಿ
ಗೋಲು ಬಾರಿಸಿ ತಂಡದ ಖಾತೆ ತೆರೆದರು. ದೆರಾಯ್ ಡಾರ್ಟೆ ಮೂಲಕ 59ನೇ ನಿಮಿಷದಲ್ಲಿ ಗೋಲು ಗಳಿಸಿದ ಕೇಪ್ ವರ್ದೆ ಹೋರಾಟವನ್ನು ಸಮಬಲಗೊಳಿಸಿದರು. ನಿಗದಿತ 90 ನಿಮಿಷಗಳ ಆಟ ಮುಗಿಯುವವರೆಗೆ ಮತ್ತೊಂದು ಗೋಲು ದಾಖಲಾಗಲಿಲ್ಲ.ಹೀಗಾಗಿ, ಹೆಚ್ಚುವರಿ ಅವಧಿಯ ಆಟ ನಡೆಯಿತು. ಆರಂಭದಲ್ಲೇ (92ನೇ ನಿಮಿಷ) ಗೋಲು ಬಾರಿಸಿದ ಲಿಸಾಂಡ್ರೊ ಮಾರ್ಟಿನೇಜ್ ಅರ್ಜೆಂಟೀನಾಗೆ 2-1 ಅಂತರದ ಮುನ್ನಡೆ ತಂದುಕೊಟ್ಟರು. ಅದಕ್ಕೆ ಪ್ರತಿಯಾಗಿ ಕೇಪ್ ವರ್ಡ್ 103ನೇ ನಿಮಿಷದಲ್ಲಿ ಗೋಲು ಗಳಿಸಿತು. ಈ ಗೋಲನ್ನು ಸಿಡ್ನಿ ಲೋಪ್ಸ್ ಕಬ್ರಾಲ್ ಬಾರಿಸಿದರು. ಆದರೆ
111ನೇ ನಿಮಿಷದಲ್ಲಿ ಅರ್ಜೆಂಟೀನಾದ ಕ್ರಿಸ್ಟಿಯನ್ ರೊಮೆರೊ ಅವರು ಬಾರಿಸಿದ ಚೆಂಡನ್ನು ಹೆಡರ್ ಮೂಲಕ ತಡೆಯಲು ಹೋದ ಕೇಪ್ ವರ್ದೆ ತಂಡದ ಡೈನಿ ಬೋರ್ಗೆಸ್, ಯಡವಟ್ಟು ಮಾಡಿಕೊಂಡರು. ಅವರ ತಲೆಗೆ ತಾಗಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆ ಸೇರಿತು. ಇದರೊಂದಿಗೆ ಅರ್ಜೆಂಟೀನಾ ಜಯ ಖಾತ್ರಿಯಾಯಿತು.
ಇನ್ನೊಂದು ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಈಜಿಪ್ಟ್ ಪ್ರಿಕ್ವಾರ್ಟರ್ ಪ್ರವೇಶಿಸಿದೆ.








