ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದೆ. ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು.
ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ
ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು.ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ 1 ರನ್ಗೆ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ ಸೊನ್ನೆ ಸುತ್ತಿದರು. ಮೂರನೇ ವಿಕೆಟ್ಗೆ ಜೊತೆಗೂಡಿದ ಅಭಿಷೇಕ್ ಶರ್ಮಾ(59 ರನ್; 24 ಎಸೆತ) ಮತ್ತು ನಾಯಕ ಶ್ರೇಯಸ್ ಅಯ್ಯರ್ (68 ರನ್; 47 ಎಸೆತ) 38 ಎಸೆತಗಳಲ್ಲಿ 82 ರನ್ ಜೊತೆಯಾಟವಾಡುವ ಮೂಲಕ ಆಸರೆಯಾದರು.
ತಿಲಕ್ ವರ್ಮಾ 13 ಎಸೆತಗಳಲ್ಲಿ 13 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಡೆತ್ ಓವರ್ನಲ್ಲಿ ಶಿವಂ ದುವೆ 21 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 185ರ ಗಡಿ ದಾಟಿಸಿದರು.ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಹ್ಯಾರಿ ಬ್ರೂಕ್ ಪಡೆಯು 190 ರನ್ ಗುರಿ ಬೆನ್ನಟ್ಟಲು ಮೈದಾನಕ್ಕಿಳಿಯುವ ಮುನ್ನವೇ ನಿರಂತರ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.






