ತಿರುವನಂತಪುರ: ಕೇರಳಂ ಯುಡಿಎಫ್ ಸರ್ಕಾರದಲ್ಲಿ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಹಣಕಾಸು, ಕಾನೂನು, ಸಾಮಾನ್ಯ ಆಡಳಿತ ಮತ್ತು ಬಂದರು ಸೇರಿದಂತೆ 33 ಇಲಾಖೆಗಳನ್ನು ನಿರ್ವಹಿಸಲಿದ್ದಾರೆ.
ಮೇ 18ರಂದು ಪ್ರಮಾಣವಚನ ಕಾರ್ಯಕ್ರಮ ನೆರವೇರಿತ್ತು. ಇದೀಗ ನೂತನ ಸಚಿವರಿಗೆ ಖಾತೆಗಳ ಹಂಚಿಕೆಗೆ
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅನುಮೋದನೆ ನೀಡಿದ್ದಾರೆ.ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಖಾತೆ ನೀಡಲಾಗಿದೆ. ಐಯುಎಂಎಲ್ ನಾಯಕ ಕುಂಞಾಲಿಕುಟ್ಟಿ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಗಣಿಗಾರಿಕೆ ಮತ್ತು ಭೂ ವಿಜ್ಞಾನ, ಕೈಮಗ್ಗ ಮತ್ತು ಜವಳಿ ಖಾತೆಗಳನ್ನು ವಹಿಸಲಾಗಿದೆ.ಕೇರಳಂ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸಣ್ಣಿ ಜೋಸೆಫ್ ಅವರಿಗೆ ವಿದ್ಯುತ್, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ನೀಡಲಾಗಿದೆ. ಹಿರಿಯ ನಾಯಕ
ಕೆ. ಮುರಳೀಧರನ್ ಅವರಿಗೆ ಆರೋಗ್ಯ, ದೇವಸ್ವಂ, ವೈದ್ಯಕೀಯ ಶಿಕ್ಷಣ ಜವಾಬ್ದಾರಿ ನೀಡಲಾಗಿದೆ. ರೋಜಿ ಎಂ. ಜಾನ್ ಅವರಿಗೆ ಉನ್ನತ ಶಿಕ್ಷಣ, ಎ.ಪಿ.ಅನಿಲ್ ಕುಮಾರ್ ಅವರಿಗೆ ಕಂದಾಯ,ಎನ್.ಶಂಸುದ್ದೀನ್ ಅವರಿಗೆ ಶಿಕ್ಷಣ ಖಾತೆ ನೀಡಲಾಗಿದೆ.
ಆರ್ಎಸ್ಪಿ ಪಕ್ಷದ ಶಿಬು ಬೇಬಿ ಜಾನ್ ಅವರಿಗೆ ಅರಣ್ಯ, ವನ್ಯಜೀವಿ ರಕ್ಷಣೆ, ಕೌಶಲ್ಯ ಅಭಿವೃದ್ಧಿ ಮತ್ತು ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷದ ಮೋನ್ ಜೋಸೆಫ್ ಅವರಿಗೆ ನೀರಾವರಿ, ಅಂತರ್ಜಲ, ನೀರು ಸರಬರಾಜು, ನೈರ್ಮಲ್ಯ ಮತ್ತು ವಸತಿ ಇಲಾಖೆಗಳ ಖಾತೆಗಳನ್ನು ನೀಡಲಾಗಿದೆ.













