ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರ್
ಕಾರ್ಯಕ್ರಮ ಉದ್ಘಾಟಿಸಿದರು.ಮಹಾತ್ಮ ಗಾಂಧೀಜಿಯವರ
ಚಿಂತನೆಗಳನ್ನು ಅನುಷ್ಠಾನ ಮಾಡಲು ಧರ್ಮಸ್ಥಳದ ಧರ್ಮಧಿಕಾರಿಗಳು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯನ್ನು ಹುಟ್ಟುಹಾಕಿದರು. ಈ ವೇದಿಕೆಯ ಮುಖಾಂತರ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ
ವ್ಯಸನ ಮುಕ್ತ ಬದುಕಿನಿಂದ ಪರಿ ಪೂರ್ಣ ಆರೋಗ್ಯ ಹಾಗೂ ನೆಮ್ಮದಿ ಸಾಧ್ಯ. ವ್ಯಸನದಿಂದ ಯುವ ಜನಾಂಗ ಮುಕ್ತವಾಗುವುದರ ಜೊತೆಗೆ ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ನೋಟರಿ ವಕೀಲ ಶ್ರೀ ಹರಿ ಕುಕ್ಕುಡೇಲು ಮಾತನಾಡಿ ಇತ್ತೀಚಿನ ದಿನಗಳಲ್ಲಿ ತಂಬಾಕು, ಸಿಗರೇಟ್, ಪಾನ್ ಮತ್ತಿತರ ನಶೆ ಭರಿಸುವ ವಸ್ತುಗಳು ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಆತಂಕದ ವಿಚಾರವಾಗಿದೆ. ಅದೇ ರೀತಿಯಲ್ಲಿ ಜಾಹಿರಾತಿನ ಮೋಹಕ್ಕೆ ಬಲಿ ಬಿದ್ದು ಮಕ್ಕಳು ಗುಟ್ಕಾ ತಂಬಾಕಿಗೆ ಮಾರುಹೋಗುತ್ತಿದ್ದಾರೆ. ಇದರ ಚಟಕ್ಕೆ ಬೀಳದಿರಲು ದೈನಂದಿನ ದಿನಚರಿ, ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುಬೇಕು ಈ ದಿಸೆಯಲ್ಲಿ ವಿದ್ಯಾರ್ಥಿ ಗಳು ಬಹಳ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೋಹನ್ ಬಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಪೊಲೀಸ್ ಠಾಣೆಯಉಪಠಾಣಾಧಿಕಾರಿಶೀನಪ್ಪ, ಕಾಲೇಜಿನ ಉಪನ್ಯಾಸಕರು,ಸುಳ್ಯ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.