ಶ್ರೀನಗರ: ಕಾಶ್ಮೀರದ ರಿಯಾಸಿ ಜಿಲ್ಲೆಯ ಕಟ್ರಾ ಬಳಿ ಚೆನಾಬ್ ನದಿಗೆ ನಿರ್ಮಿಸಿರುವ, ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.ಉದ್ಘಾಟನೆ ನಂತರ, ತ್ರಿವರ್ಣ ಧ್ವಜ ಹಿಡಿದು ಮೋದಿ ಅವರು, ಸೇತುವೆ ಮೇಲೆ ನಡೆಯುವ ಮೂಲಕ ಗಮನ ಸೆಳೆದರು. ಉದ್ಘಾಟನೆಗೂ ಮುನ್ನ, ರೈಲಿನ ಎಂಜಿನ್ ಕೋಚ್ನಲ್ಲಿ ಪ್ರಯಾಣಿಸಿ, ಕಾರ್ಯಕ್ರಮ ಸ್ಥಳವನ್ನು ಮೋದಿ ತಲುಪಿದರು.ಚೆನಾಬ್ ಸೇತುವೆಯನ್ನು
ಉದ್ಘಾಟಿಸಿದ ನಂತರ, ಮೋದಿ ಅವರು, ಅಂಜಿ ನದಿಗೆ ನಿರ್ಮಿಸಿರುವ ದೇಶದ ಮೊದಲ ರೈಲ್ವೆ ತೂಗು ಸೇತುವೆಯನ್ನು ಕೂಡ ಉದ್ಘಾಟಿಸಿದರು. ಇದೇ ವೇಳೆ, ಬಾರಾಮುಲ್ಲಾ–ಕಟ್ರಾ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರಕ್ಕೂ ಅವರು ಹಸಿರು ನಿಶಾನೆ ತೋರಿದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿದ್ದರು. ಚೆನಾಬ್ ನದಿಗೆ ನಿರ್ಮಿಸಿರುವ ರೈಲ್ವೆ ಸೇತುವೆಯು, 272 ಕಿ.ಮೀ. ಉದ್ದದ ಉಧಂಪುರ–ಶ್ರೀನಗರ–ಬಾರಾಮುಲ್ಲಾ ರೈಲ್ವೆ ಲಿಂಕ್ (ಯುಎಸ್ಬಿಆರ್ಎಲ್) ಯೋಜನೆಯ ಭಾಗವಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 43,780 ಕೋಟಿ.
ಚೆನಾಬ್ ಸೇತುವೆಯನ್ನು 1,486 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು, ಗಂಟೆಗೆ 260 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯು ಸೃಷ್ಟಿಸುವ ಒತ್ತಡವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಈ ಸೇತುವೆ 120 ವರ್ಷಗಳಷ್ಟು ಬಾಳಿಕೆ ಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಜಿ ಸೇತುವೆಯು 96 ಕೇಬಲ್ಗಳನ್ನು ಒಳಗೊಂಡಿದೆ. 40 ಸಾವಿರ ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ ಅವರು, ಕೆಲ ಯೋಜನೆಗಳನ್ನು ಸಹ ಉದ್ಘಾಟಿಸಿದರು.