ಮುಂಬೈ:ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಗಳಿಸಿದರೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತು.244 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಸನ್ರೈಸರ್ಸ್ 8 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ, ಮುಂಬೈ ವಿರುದ್ಧ ಅತಿದೊಡ್ಡ ರನ್ ಚೇಸ್ ದಾಖಲೆ ಮಾಡಿತು.ಇದು ಮುಂಬೈಗೆ
6ನೇ ಸೋಲು,ಸನ್ರೈಸರ್ಸ್ಗೆ 6ನೇ ಗೆಲುವು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ಗಳ ಬೃಹತ್ ಮೊತ್ತ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಸನ್ರೈಸರ್ಸ್ 18.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಎಸ್ಆರ್ಎಚ್ ಪರ ಅಭಿಷೇಕ್ ಶರ್ಮ 24 ಎಸೆತಗಳಲ್ಲಿ 4 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 44, ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 4 ಬೌಂಡರಿ ಹಾಗು 8 ಸಿಕ್ಸರ್ ನೆರವಿನಿಂದ 74, ಹೆನ್ರಿ ಕ್ಲಾಸೆನ್ 30 ಎಸೆತಗಳಲ್ಲಿ 7 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ ಅಜೇಯ 65, ಸಲಿಲ್ ಅರೋರ 10 ಎಸೆತಗಳಲ್ಲಿ 2 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ ಅಜೇಯ 30 ರನ್ ಗಳಿಸಿದರು. ಅಭಿಷೇಕ್ ಮತ್ತು ಹೆಡ್ ಮೊದಲ ವಿಕೆಟ್ಗೆ 8.4 ಓವರ್ಗಳಲ್ಲಿ129 ರನ್ ಗಳಿಸಿ ಭದ್ರ ಬುನಾದಿ ಹಾಕಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈಗೆ ರಿಯಾನ್ ರಿಕೆಲ್ಟನ್ ಅಮೋಘ ಶತಕ ಬೃಹತ್ ಸ್ಕೋರು ಗಳಿಸಲು ನೆರವಾಯಿತು.ಆರಂಭಿಕರಾದ ವಿಲ್ ಜಾಕ್ಸ್ ಮತ್ತು ರಿಯಾನ್ ಅಮೋಘ ಆರಂಭ ನೀಡಿದರು.ಈ ಜೋಡಿ, ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ ಕೇವಲ 7 ಓವರ್ಗಳಲ್ಲೇ 93 ರನ್ ಕೂಡಿಸಿತು.22 ಎಸೆತಗಳಲ್ಲಿ 46 ರನ್ ಗಳಿಸಿದ್ದ ಜಾಕ್ಸ್ ಔಟಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ನಮನ್ ಧೀರ್ (22) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (31) ಜೊತೆ ತಲಾ ಅರ್ಧಶತಕದ ಜೊತೆಯಾಟವಾಡಿದ ರಿಯಾನ್ 55 ಎಸೆತಗಳಲ್ಲಿ 123 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರ ಆಟದ ಬಲದಿಂದ ಮುಂಬೈ ಪಡೆ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 243 ರನ್ ಕಲೆಹಾಕಿತು.













