ಅಹಮದಾಬಾದ್: ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ, ಗುಜರಾತ್ ಟೈಟನ್ಸ್ ವಿರುದ್ಧ 4ವಿಕೆಟ್ಗಳ ಸೋಲನುಭಿಸಿತು.ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 19.2 ಓವರ್ಗಳಲ್ಲಿ ಕೇವಲ 155 ರನ್ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 15.5 ಓವರ್ಗಳಲ್ಲಿ
6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಗುಜರಾತ್ ಪರ ನಾಯಕ ಶುಭ್ಮನ್ ಗಿಲ್ ಬಿರುಸಿನ ಆರಂಭ ಒದಗಿಸಿದರು.ಗಿಲ್ 18 ಎಸೆತಗಳಲ್ಲಿ 4 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 43 ರನ್, ಜೋಸ್ ಬಟ್ಲರ್ 19 ಎಸೆತಗಳಲ್ಲಿ 3 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ 39 ರನ್, ರಾಹುಲ್ ತೆವಾಟಿಯ 27 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಮೊದಲ ಬಾರಿಗೆ ಆಲ್ ಔಟ್ ಆಯಿತು.ಜೇಕಬ್ ಬೆಥೆಲ್ ಜೊತೆ ಇನಿಂಗ್ಸ್ ಆರಂಭಿಸಿದ ಅನುಭವಿ ವಿರಾಟ್ ಕೊಹ್ಲಿ (13 ಎಸೆತ, 28 ರನ್), ಬಿರುಸಿನ ಆರಂಭ ನೀಡಿದರು. ಎರಡನೇ ಓವರ್ನಲ್ಲಿ ವೇಗಿ ಕಗಿಸೊ ರಬಾಡಗೆ ಸತತ ಐದು ಬೌಂಡರಿ ಬಾರಿಸಿದ ಅವರು, ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದರು. ಆದರೆ, ಆ ಲೆಕ್ಕಾಚಾರವು ಮುಂದಿನ ಓವರ್ನಲ್ಲೇ ತಲೆಕೆಳಗಾಯಿತು.
ಇನಿಂಗ್ಸ್ನ ಮೂರನೇ ಓವರ್ನಲ್ಲಿ ಬೆಥೆಲ್ (5) ವಿಕೆಟ್ ಪಡೆದು, ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಮೊಹಮ್ಮದ್ ಸಿರಾಜ್ ತಮ್ಮ ತಂಡಕ್ಕೆ ಮೊದಲ ಮೇಲುಗೈ ತಂದುಕೊಟ್ಟರು. ನಂತರದ ಓವರ್ನಲ್ಲಿ ಕೊಹ್ಲಿಯನ್ನು ರಬಾಡ ಔಟ್ ಮಾಡಿದರು.
ಇದರ ಬೆನ್ನಲ್ಲೇ, ಆರ್ಸಿಬಿ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ರಜತ್ 19 ರನ್ ಗಳಿಸಿ ಔಟಾದರೆ, ಜಿತೇಶ್ ಶರ್ಮಾ (1) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಟಿಮ್ ಡೆವಿಡ್ (7), ಕೃಣಾಲ್ ಪಾಂಡ್ಯ (4) ಆಟ ಹೆಚ್ಚು ಹೊತ್ತು ನಡೆಯಲಿಲ್ಲ.ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಇನಿಂಗ್ಸ್ ಬೆಳೆಸುವ ಪ್ರಯತ್ನ ಮಾಡಿದ ಕನ್ನಡಿಗ ದೇವದತ್ತ ಪಡಿಕ್ಕಲ್, 24 ಎಸೆತಗಳಲ್ಲಿ 40 ರನ್ ಗಳಿಸಿದರು.ಕೊನೆಯಲ್ಲಿ, ರೊಮಾರಿಯೊ ಶೆಫೆರ್ಡ್ (17), ವೆಂಕಟೇಶ್ ಅಯ್ಯರ್ (12) ಮತ್ತು ಭುವನೇಶ್ವರ್ ಕುಮಾರ್ (ಅಜೇಯ 15 ರನ್) ಅಲ್ಪ ಕಾಣಿಕೆ ನೀಡಿದರು. ಹೀಗಾಗಿ, ತಂಡದ ಮೊತ್ತ 150ರ ಗಡಿ ದಾಟಿತು.
ಗುಜರಾತ್ ಪರ ಅರ್ಷದ್ ಖಾನ್ ಮೂರು ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್ ಎರಡು ವಿಕೆಟ್ ಕಿತ್ತರು. ಸಿರಾಜ್ ಹಾಗೂ ರಬಾಡ ಒಂದೊಂದು ವಿಕೆಟ್ ಹಂಚಿಕೊಂಡರು.
ಇತ್ತಂಡಗಳು ಟೂರ್ನಿಯಲ್ಲಿ ತಲಾ 9 ಪಂದ್ಯಗಳನ್ನು ಆಡಿವೆ. ಆರ್ಸಿಬಿ ಆರರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಟೈಟನ್ಸ್ 5ರಲ್ಲಿ ಜಯ ಸಾಧಿಸಿ 5ನೇ ಸ್ಥಾನದಲ್ಲಿ ಉಳಿದಿದೆ. ಇಂದು ಗೆದ್ದರೆ ಅಗ್ರಸ್ಥಾನಕ್ಕೇರುವ ಅವಕಾಶ ಆರ್ಸಿಬಿಗೆ ಇತ್ತು.ಪ್ಲೇಆಫ್ ಸಾಧ್ಯತೆ ಉಳಿಸಲು ಟೈಟನ್ಸ್ಗೂ ಜಯ ಅನಿವಾರ್ಯವಾಗಿತ್ತು.













