ಸುಳ್ಯ:ಕಾಡಾನೆ ಮತ್ತು ವನ್ಯ ಪ್ರಾಣಿಗಳ ಹಾವಳಿ ತೀವ್ರಗೊಂಡಿದ್ದು ಇದನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು
ಐವರ್ನಾಡಿನ ಕೃಷಿಕ ಹಿತರಕ್ಷಣಾ ಸಮಿತಿ ವತಿಯಿಂದ ಐವರ್ನಾಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆದ ಕಾಡು ಪ್ರಾಣಿಗಳ ಉಪಟಳ ತಡೆಗಟ್ಟಲು ಮತ್ತು ಪರಿಹಾರ ಉಪಾಯಗಳ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಕೃಷಿಕರು ಆಗ್ರಹಿಸಿದ್ದಾರೆ.ಸಂವಾದದಲ್ಲಿ ಭಾಗವಹಿಸಿದ ಕೃಷಿಕರು ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಗ್ರಾಮಸ್ಥರು ಹಾಗೂ
ಕೃಷಿಕರು ತೀವ್ರ ಆತಂಕಕ್ಕೆ ಮತ್ತು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಅಡಿಕೆ, ತೆಂಗು,ಬಾಳೆ,ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸುತ್ತಿವೆ.ಇದರಿಂದ ಕೃಷಿಕರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಆದುದರಿಂದ ಗ್ರಾಮದ ಕೃಷಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ತಕ್ಷಣ ಕಾಡಿನತ್ತ ಅಟ್ಟಬೇಕು, ಆನೆಗಳು ಗ್ರಾಮಕ್ಕೆ ಪ್ರವೇಶಿಸುವ ಮಾರ್ಗಗಳನ್ನು ಗುರುತಿಸಿ,
ಸೋಲಾರ್ ಬೇಲಿ, ಆನೆ ಕಂದಕ, ಕಾಂಕ್ರೀಟ್ ತಡೆಬೇಲಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಸೋಲಾರ್ ಬೇಲಿ ನಿರ್ಮಾಣಕ್ಕೆ ನೀಡುವ ಸಬ್ಸಿಡಿ ಹೆಚ್ಚಿಸಬೇಕು, ಆನೆಗಳ ಹಾವಳಿಯಿಂದ ಹಾನಿಗೊಳಗಾದ ಬೆಳೆಹಾನಿಗೆ ಸೂಕ್ತ ಪರಿಹಾರವನ್ನು ಶೀಘ್ರವಾಗಿ ನೀಡಬೇಕು, ಮಂಗಗಳನ್ನು ಸ್ಥಳಾಂತರ ಮಾಡಬೇಕು.
ಕಾಡಿನಲ್ಲಿ ಬಿದಿರು, ಹಣ್ಣು ಹಂಪಲು ಗಿಡ ನೆಡಬೇಕು. ಆನೆ ಹಾವಳಿ ಮರುಕಳಿಸದಂತೆ ಶಾಶ್ವತ ಪರಿಹಾರ ಯೋಜನೆಯನ್ನು ರೂಪಿಸಬೇಕು

ಎಂದು ಒತ್ತಾಯಿಸಿದರು. ಅರಣ್ಯದ ಗಡಿಭಾಗದಲ್ಲಿ ಬೆಳಕು ವ್ಯವಸ್ಥೆ ಮಾಡಬೇಕು, ಕೋವಿ ಪರವಾನಗಿ ನವೀಕರಣ, ವರ್ಗಾವಣೆ ಮತ್ತು ಹೊಸ ನೋಂದಣಿ ಪ್ರಕ್ರಿಯೆಗಳನ್ನು ಸರಳೀಕರಿಸಿ, ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಕೃಷಿಕರು ಒತ್ತಾಯಿಸಿದರು.
ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ,ಪ್ರಮುಖರಾದ ನೂಜಾಲು ಪದ್ಮನಾಭ, ಭರತ್ ಕುಮಾರ್, ಸತ್ಯಶಾಂತಿ ತ್ಯಾಗಮೂರ್ತಿ, ಜಯಪ್ರಕಾಶ್ ನೆಕ್ರಪ್ಪಾಡಿ, ನವೀನ್ ಸಾರಕೆರೆ,ರಾಜೇಶ್ ಭಟ್ ಬಾಂಜಿಕೋಡಿ, ಶಿವರಾಮ ನೆಕ್ರಪ್ಪಾಡಿ, ಸದಾನಂದ ಹುಲಿಮನೆ ಮತ್ತಿತರರು ಮಾತನಾಡಿದರು.
ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಹಾಗು ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ. ಸಂವಾದದಲ್ಲಿ ಮಾತನಾಡಿ ಕಾಡು ಪ್ರಾಣಿಗಳ ಉಪಟಳ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ನಾಡಿಗೆ ಬರುವ ಆನೆಗಳನ್ನು ಕಾಡಿಗೆ

ಅಟ್ಟಲು ಕ್ರಮ ಕೈಗೊಳ್ಳಲಾಗುವುದು. ಅರಣ್ಯದಂಚಿನಲ್ಲಿ ಅಗತ್ಯ ಇರುವ ಕಡೆ ಆನೆ ಕಂದಕ, ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡಲಾಗುವುದು. ಕೃಷಿಕರಿಗೆ ಸೋಲಾರ್ ಬೇಲಿ ನಿರ್ಮಾಣ ಮಾಡಲು ಶೆ.50ರಷ್ಟು ಸಬ್ಸಿಡಿ ನೀಡಲಾಗುತಿದೆ.ಸಬ್ಸಿಡಿಯನ್ನು ಶೇ.90ಕ್ಕೆ ಏರಿಸಬೇಕು ಎಂಬ ಕೃಷಿಕರ ಬೇಡಿಕೆಯನ್ನು ಈಗಾಗಲೇ ಸರಕಾರಕ್ಕೆ
ಕಳುಹಿಸಲಾಗಿದೆ ಎಂದರು.
ಉದ್ಘಾಟನೆ:
ಕಾರ್ಯಾಗಾರವನ್ನು ಸುಳ್ಯ ತಹಶೀಲ್ದಾರ್ ಮಂಜುಳ.ಎಂ. ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿಕ ಹಿತರಕ್ಷಣಾ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ್ ಮಡ್ತಿಲ ವಹಿಸಿದ್ದರು. ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ , ಪುತ್ತೂರು ವಯಲ ಅರಣ್ಯಾಧಿಕಾರಿ ಕಿರಣ್.ಬಿ. ಎಂ.ಐವರ್ನಾಡು ಗ್ರಾಮ ಆಡಳಿತಾಧಿಕಾರಿ ಸುಜು, ಗ್ರಾಮ ಪಂಚಾಯತ್ ಕಾರ್ಯದರ್ಶಿ ತಿರಿಮಲೇಶ್ವರ, ಸಮಿತಿ ಸಹ ಸಂಚಾಲಕರಾದ ಗಣೇಶ್ ಕೊಚ್ಚಿ ಮತ್ತು ಸಾತ್ವಿಕ್ ಕುದುಂಗು ಉಪಸ್ಥಿತರಿದ್ದರು. ಕಿಶನ್ ಜಬಳೆ ಮತ್ತು ಅಜಿತ್ ಕಾರ್ಯಕ್ರಮ ನಿರೂಪಿಸಿದರು.






