ಬೆಂಗಳೂರು:ಕಸ್ತೂರಿ ರಂಗನ್ ವರದಿಯ ಪರಿಣಾಮದಿಂದ ಸುಳ್ಯ ತಾಲೂಕಿನ 26 ಗ್ರಾಮಗಳ ಜನರ ಕೃಷಿ, ಜಮೀನು ಹಾಗೂ ಬದುಕಿನ ಮೇಲೆ ಯಾವುದೇ ಅನಿಶ್ಚಿತತೆ ಉಂಟಾಗದಂತೆ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳಬೇಕು.ಜನರ ಬದುಕು,ಕೃಷಿ ಮತ್ತು ಜಮೀನಿನ ಹಕ್ಕುಗಳಿಗೆ ಧಕ್ಕೆಯಾಗದಂತೆ ನ್ಯಾಯಯುತವಾದ
ಪರಿಹಾರ ಒದಗಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯಿಸಿದ್ದಾರೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಅವರು ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದರು.ಹಲವು ವರ್ಷಗಳಿಂದ ಈ ಭಾಗದ ಜನರು ತಮ್ಮ ಜಮೀನು ಮತ್ತು ಹಕ್ಕುಗಳ ಕುರಿತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಮೀನುಗಳ ಗಡಿ ಹಾಗೂ ದಾಖಲೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.ಜನರ ಹಕ್ಕು ಮತ್ತು
ಬದುಕಿನ ರಕ್ಷಣೆಗೆ ನಾವು ಈಗಾಗಲೇ ಪ್ರತಿಭಟನೆ ಹಾಗೂ ಹೋರಾಟ ನಡೆಸಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವುದು ಸರ್ಕಾರದ ಜವಾಬ್ದಾರಿ.ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ ನಡೆಸಿ, ಯಾವುದು ಅರಣ್ಯ ಭೂಮಿ, ಯಾವುದು ಕಂದಾಯ ಭೂಮಿ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು. ಈ ಮೂಲಕ ರೈತರು ಮತ್ತು ಗ್ರಾಮಸ್ಥರಲ್ಲಿರುವ ಗೊಂದಲಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.






