ಚೆನ್ನೈ:ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ (50ಕ್ಕೆ4) ಅವರ ನೇತೃತ್ವದ ಮಧ್ಯಮವೇಗಿಗಳ ಪಡೆಯ ದಾಳಿಗೆ ಕುಸಿದ ಬಾಂಗ್ಲಾದೇಶದ ವಿರುದ್ಧ ಭಾರತ ಭಾರೀ ಮುನ್ನಡೆ ಸಾಧಿಸಿದೆ. ಭಾರತದ ಮೊದಲ ಇನಿಂಗ್ಸ್ನ 376 ರನ್ಗಳಿಗೆ ಉತ್ತರವಾಗಿ ಬಾಂಗ್ಲಾ 149 ರನ್ ಗಳಿಸಿ ಆಲ್ ಔಟ್ ಆಯಿತು. ಆಕಾಶ್ ದೀಪ್ (19ಕ್ಕೆ2) ಮತ್ತು ಮೊಹಮ್ಮದ್ ಸಿರಾಜ್ (30ಕ್ಕೆ2) ಬೂಮ್ರಾಗೆ ಉತ್ತಮ ಸಾಥ್ ನೀಡಿದರು.227 ರನ್ಗಳ
ಬೃಹತ್ ಮುನ್ನಡೆ ಸಾಧಿಸಿದ ಭಾರತ ಎರಡನೇ ಇನಿಂಗ್ಸ್ ಆರಂಭಿಸಿದೆ. ದಿನದಾಟದ ಮುಕ್ತಾಯಕ್ಕೆ 3 ವಿಕೆಟ್ಗಳಿಗೆ 81 ರನ್ ಗಳಿಸಿದೆ. ಶುಭಮನ್ ಗಿಲ್ (ಬ್ಯಾಟಿಂಗ್ 33) ಮತ್ತು ರಿಷಭ್ ಪಂತ್ (ಬ್ಯಾಟಿಂಗ್ 12) ಕ್ರೀಸ್ನಲ್ಲಿದ್ದಾರೆ. ಒಟ್ಟು 308 ರನ್ಗಳ ಮುನ್ನಡೆಯನ್ನು ಭಾರತ ಸಾಧಿಸಿದೆ.ಆತಿಥೇಯ ತಂಡವು ಗುರುವಾರ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ಗಳಿಗೆ 339 ರನ್ ಗಳಿಸಿತ್ತು. ಶತಕ ಗಳಿಸಿ ಕ್ರೀಸ್ನಲ್ಲಿದ್ದ ಆರ್. ಅಶ್ವಿನ್ ಮತ್ತು ಶತಕದ ಸನಿಹದಲ್ಲಿದ್ದ ರವಿಂದ್ರ ಜಡೇಜ ಎರಡನೇ ದಿನದಾಟದ ಬೆಳಿಗ್ಗೆ ಬೇಗನೆ ಔಟಾದರು. ಒಟ್ಟು 11.2 ಓವರ್ಗಳಲ್ಲಿ ಇವರಿಬ್ಬರೂ ಸೇರಿದಂತೆ ನಾಲ್ವರು ಬ್ಯಾಟರ್ಗಳ ವಿಕೆಟ್ಗಳನ್ನು ಬಾಂಗ್ಲಾ ಬೌಲರ್ಗಳು ಉರುಳಿಸಿದರು. ಒಟ್ಟು 47 ರನ್ಗಳು ತಂಡದ ಖಾತೆಗೆ ಸೇರಿದವು. ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ (6–3–8–3) ಮಿಂಚಿದರು.
ಆದರೆ ಬಾಂಗ್ಲಾ ಬಳಗದಲ್ಲಿ ಈ ಸಂತಸವು ಹೆಚ್ಚು ಹೊತ್ತು ಉಳಿಯಲಿಲ್ಲ. ಇನಿಂಗ್ಸ್ನ ಆರಂಭದಿಂದಲೇ ಬೂಮ್ರಾ ಆರ್ಭಟ ಆರಂಭವಾಯಿತು. ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ ಅವರನ್ನು ಮೊದಲ ಓವರ್ನ ಕೊನೆಯ ಎಸೆತದಲ್ಲಿ ಕ್ಲೀನ್ಬೌಲ್ಡ್ ಮಾಡಿದರು. ಇದಾಗಿ ಸ್ವಲ್ಪಹೊತ್ತಿನ ನಂತರ ಇನ್ನೊಂದು ಬದಿಯಿಂದ ದಾಳಿ ಆರಂಭಿಸಿದ್ದ ಆಕಾಶ್ ದೀಪ್ ಸತತ ಎರಡು ಎಸೆತಗಳಲ್ಲಿ ಝಾಕೀರ್ ಹಸನ್ ಹಾಗೂ ಮೊಮಿನುಲ್ ಹಕ್ ಅವರ ವಿಕೆಟ್ಗಳನ್ನು ಉರುಳಿಸಿದರು.
ನೆಲಕಚ್ಚಿ ಆಡುತ್ತಿದ್ದ ನಾಯಕ ನಜ್ಮುಲ್ ಹುಸೇನ್ ಶಾಂತೊ (20; 30ಎ) ಅವರ ವಿಕೆಟ್ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ಶಕೀಬ್ ಅಲ್ ಹಸನ್ (32 ರನ್), ಲಿಟನ್ ದಾಸ್ (22 ರನ್) ಮತ್ತು ಮೆಹದಿ ಹಸನ್ ಮಿರಜ್ (ಔಟಾಗದೆ 27) ಅವರು ಒಂದಿಷ್ಟು ಹೋರಾಟ ನಡೆಸಿದರು. ಎಡಗೈ ಸ್ಪಿನ್ನರ್ ಜಡೇಜ ಅವರು ಶಕೀಬ್ ಮತ್ತು ಲಿಟನ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಬೌಲರ್ಗಳು ಯಾವುದೇ ಹಂತದಲ್ಲಿಯೂ ದೊಡ್ಡ ಜೊತೆಯಾಟ ಬೆಳೆಯಲು ಆಸ್ಪದ ಕೊಡಲಿಲ್ಲ.