ಮಡಿಕೇರಿ:ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿತ 26ನೇ ವರ್ಷದ ಕೊಡವ ಕೌಟುಂಬಿಕ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿ ಕುಲ್ಲೇಟಿರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಪ್ರತಿಷ್ಠಿತ ಟ್ರೋಫಿಗೆ ವಿಜಯದ ಮುತ್ತಿಟ್ಟಿದೆ.ಗೆಲುವಿಗಾಗಿ ಚೆಪ್ಪುಡಿರ ತಂಡ ಪ್ರಬಲ ಹೋರಾಟ ನಡೆಸಿದರೂ 3-1 ಗೋಲುಗಳ ಅಂತರದಲ್ಲಿ
ಸೋಲೊಪ್ಪಿಕೊಂಡು ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.ಪರದಂಡ ತಂಡ 3ನೇ ಸ್ಥಾನ ಹಾಗೂ ಪಳಂಗಂಡ ತಂಡ 4ನೇ ಸ್ಥಾನ ಪಡೆದವು. ಮೊದಲ ಸ್ಥಾನ ಪಡೆದ ಕುಲ್ಲೇಟಿರ ತಂಡ 3 ಲಕ್ಷ ರೂ. ನಗದು ಮತ್ತು ಚಾಂಪಿಯನ್ ಟ್ರೋಫಿ ಪಡೆದು ಬೀಗಿದರೆ, ರನ್ನರ್ಸ್ ಸ್ಥಾನ ಪಡೆದ ಚೆಪ್ಪುಡಿರ ತಂಡ 2 ಲಕ್ಷ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಉತ್ತಮ ಸಾಧನೆ ತೋರಿದ ಆಟಗಾರರು ವೈಯಕ್ತಿಕ ಪ್ರೋತ್ಸಾಹಕ ಬಹುಮಾನಗಳನ್ನು ಪಡೆದುಕೊಂಡರು. ಮೈದಾನದಲ್ಲಿ ಸಹಸ್ರಾರು ಮಂದಿ ಪ್ರೇಕ್ಷಕರು ಹಾಜರಿದ್ದು, ಹಾಕಿ ನಮ್ಮೆಯನ್ನು ಸಂಭ್ರಮಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿದ್ದ ಕೇಂದ್ರ ಸರ್ಕಾರದ ಕ್ರೀಡಾ ಸಚಿವ ಡಾ. ಮನ್ಸೂಕ್ ಮಾಂಡವಿಯಾ ಮಾತನಾಡಿ 2036ರಲ್ಲಿ ಭಾರತದಲ್ಲಿ ಓಲಂಪಿಕ್ಸ್ ನಡೆಸಲು ಚಿಂತನೆಗಳು ನಡೆದಿದ್ದು, ಈ ಅವಧಿ ಒಳಗಾಗಿ ಭಾರತವನ್ನು 10 ಶ್ರೇಣಿಯ ಕ್ರೀಡಾ ಸಾಧಕ ದೇಶಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ. ಆ ನಿಟ್ಟಿನಲ್ಲಿಯೂ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ ಕೊಡಗು ಜಿಲ್ಲೆಯ ಬಾಡಗ ಗ್ರಾಮದಲ್ಲಿ 12 ಎಕರೆ ಜಾಗದಲ್ಲಿ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣವಾಗುತ್ತಿದೆ. ಮುಂದಿನ 3 ವರ್ಷದ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ ಎಂದರು.

ಸಂಸದ ಯದುವೀರ್ ಒಡೆಯರ್ ಮಾತನಾಡಿದರು.
ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ,
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಅಜ್ಜಿಕುಟ್ಟಿರ ಎಸ್.ಬೋಪಣ್ಣ,
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಚೇನಂಡ ಕುಟುಂಬದ ಪ್ರಮುಖರು, ಮಾಜಿ ಓಲಂಪಿಯನ್ಗಳು ಸೇರಿದಂತೆ ಗಣ್ಯರು ಹಾಜರಿದ್ದರು.












