ಸುಳ್ಯ: ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಳ್ಯದಲ್ಲಿ ಉತ್ತಮ ಮಳೆಯಾಗಿದೆ. ಸಂಜೆ 6 ಗಂಟೆಯಿಂದ ವಿವಿಧ ಕಡೆಗಳಲ್ಲಿ ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ಮತ್ತು ಏರಿದ ಉಷ್ಣಾಂಶದಿಂದ ಬಸವಳಿದಿರುವ ಇಳೆಗೆ ಮಳೆ ತಂಪೆರೆದಿದೆ. ಮಳೆಯೊಂದಿಗೆ
ಗುಡುಗು ಸಿಡಿಲಿನ ಅಬ್ಬರ ಜೋರಾಗಿಯೇ ಇತ್ತು. ಮಳೆ ಆರಂಭವಾಗುವ ಮೊದಲೇ ಸುಳ್ಯದಲ್ಲಿ ವಿದ್ಯುತ್ ಕಡಿತವಾಗಿದ್ದು ಸುಳ್ಯದಲ್ಲಿ ಕತ್ತಲು ಆವರಿಸಿದೆ.ರಾಜ್ಯದಲ್ಲಿ ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು ಮುಂದಿನ ಕೆಲವು ದಿನಗಳ ಕಾಲ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ
ಆಯ್ದ ಜಿಲ್ಲೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಬಿಸಿಲಿನ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಉಂಟಾಗುವುದಿಲ್ಲ.











