ಚೆನ್ನೈ: ತಮಿಳು ನಾಡಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ನೇತೃತ್ವದ ಸರಕಾರ ರಚನೆಯ ಅನಿಶ್ಚಿತತೆ ಮುಂದುವರಿದಿದೆ.ಸರ್ಕಾರ ರಚನೆಗೆ ಅಗತ್ಯ ಬಹುಮತ ತಮ್ಮ ಬಳಿ ಇದೆ ಎಂದು ರಾಜ್ಯಪಾಲರ ಬಳಿ ಶುಕ್ರವಾರ ಹಕ್ಕು ಮಂಡಿಸಿದ್ದ ವಿಜಯ್ಗೆ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ತಮ್ಮ ಬೆಂಬಲ ಘೋಷಣೆ ಕುರಿತ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸುವುದಾಗಿ ಹೇಳಿದೆ.234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಜಯಿಸಿ ಅತಿದೊಡ್ಡ ಪಕ್ಷ ಎನಿಸಿರುವ
ಟಿವಿಕೆಗೆ ಬಹುಮತ ಸಾಬೀತು ಮಾಡಲು ಇನ್ನೂ 11 ಸ್ಥಾನ ಅಗತ್ಯ ಇತ್ತು. ಐದು ಸ್ಥಾನ ಹೊಂದಿರುವ ಕಾಂಗ್ರೆಸ್, ತಲಾ ಎರಡು ಕಡೆ ಗೆದ್ದಿರುವ ಸಿಪಿಐ, ಸಿಪಿಐ(ಎಂ) ಬೆಂಬಲ ಘೋಷಿಸಿವೆಯಾದರೂ, ಇನ್ನೂ ಎರಡು ಸ್ಥಾನಗಳ ಕೊರತೆ ಎದುರಾಗಿದೆ. ಹೀಗಾಗಿ, ಫಲಿತಾಂಶ ಬಂದು ಐದು ದಿನಗಳಾದರೂ ಸರ್ಕಾರ ರಚನೆ ಕುರಿತ ಅನಿಶ್ಚಿತತೆ ಮುಂದುವರಿದಿದೆ.
ತಮಿಳುನಾಡಲ್ಲಿ ಪ್ರಸ್ತುತ ವಿಧಾನಸಭೆ ಅವಧಿ ಮೇ 10ಕ್ಕೆ ಅಂತ್ಯಗೊಳ್ಳಲಿದೆ. ಅಷ್ಟರಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆ ಇದೆ.
ಸರ್ಕಾರ ರಚನೆ ವಿಚಾರವಾಗಿ ರಾಜ್ಯಪಾಲರನ್ನು ಮೂರು ಬಾರಿ ಭೇಟಿಯಾಗಿರುವ ವಿಜಯ್,118 ಶಾಸಕರ ಬೆಂಬಲ ಹೊಂದಿರುವಾಗಿ ಹೇಳಿದ್ದಾರೆ.ಆದಾಗ್ಯೂ, ವಿಜಯ್ ಪಕ್ಷಕ್ಕಿರುವುದು 116 ಶಾಸಕರ ಬಲವಷ್ಟೇ ಆದುದರಿಂದ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ವಿಜಯ್ ಅವರಿಗೆ ಕರೆ ನೀಡಿಲ್ಲ. ವಿಜಯ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ ಯೂಟರ್ನ್ ಹೊಡೆದಿದೆ. ಡಿಎಂಕೆ ಜೊತೆಗಿನ ಜಾತ್ಯತೀತ ಪ್ರಗತಿಪರ ಒಕ್ಕೂಟದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದೆ.
ಪಕ್ಷದ ಸದಸ್ಯರೊಂದಿಗೆ ಸತತ ಸಭೆಗಳನ್ನು ನಡೆಸಿದ ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್, ನಿರ್ಗಮಿತ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿವಾಸಕ್ಕೂ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಮಧ್ಯೆ 47 ಶಾಸಕರನ್ನು ಹೊಂದಿರುವ ಎಐಎಡಿಎಂಕೆ ಪಕ್ಷವು ಡಿಎಂಕೆಯ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ ಎಂಬ ಊಹಾಪೋಹಗಳನ್ನೂ ಹುಟ್ಟುಹಾಕಿದೆ. ಆದರೆ, ಎಐಎಡಿಎಂಕೆಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಡಿಎಂಕೆ ಸ್ಪಷ್ಟವಾಗಿ ಹೇಳಿದೆ.
ಈ ಮಧ್ಯೆ ಟಿವಿಕೆಗೆ ಬೆಂಬಲಿಸಲು ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನು ವಿಸಿಕೆ ಮುಂದಿಟ್ಟಿದೆ ಎಂಬ ವರದಿಗಳು ಇದೆ.











