ಮಂಡೆಕೋಲು:ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಜಿಲ್ಲಾ ಮಟ್ಟದ 73ನೇ ಸಹಕಾರ ಸಪ್ತಾಹ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಸುಳ್ಯ ತಾಲೂಕು ಸಹಕಾರಿ ಯೂನಿಯನ್, ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ
ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ನಡೆಯುವ
ಕಾರ್ಯಕ್ರಮದ ಅಂಗವಾಗಿ ಅದ್ದೂರಿ ಮತ್ತು ಆಕರ್ಷಕ ಮೆರವಣಿಗೆ ನಡೆಯಿತು. ಮಂಡೆಕೋಲಿನ ಮುಖ್ಯ ಪೇಟೆಯಲ್ಲಿ ನಡೆದ ಜಾಥಾಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಅವರು ತೆಂಗಿನ ಕಾಯಿ ಒಡೆದು, ಸಹಕಾರ ಧ್ವಜ ಬೀಸಿ ಚಾಲನೆ ನೀಡಿದರು.
ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ

ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನಿರ್ದೇಶಕರುಗಳು,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ. ಹಾಗು ಪ್ರಮುಖರು ಇದ್ದರು.
ಚೆಂಡೆ, ವಾದ್ಯಮೇಳಗಳು, ಬಣ್ಣ ಬಣ್ಣದ ಮುತ್ತು ಕೊಡೆ, ಪೂರ್ಣಕುಂಭ, ಗೊಂಬೆ ಕುಣಿತ, ಕೀಲು ಕುದುರೆ, ಯಕ್ಷಗಾನ ವೇಷಗಳು, ವಾದ್ಯ ಮೇಳಗಳು, ಸಹಕಾರಿ ಧ್ವಜ ಹಿಡಿದ ನವೋದಯ ಸ್ವಸಹಾಯ ಸಂಘದ

ಸದಸ್ಯರು, ಸಾರ್ವಜನಿಕರು ಸಾಥ್ ನೀಡಿದರು.
ಮಂಡೆಕೋಲು ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಪ್ತಾಹದ ಅಂಗವಾಗಿ ಸಹಕಾರ ಧ್ವಜಾರೋಹಣವನ್ನು ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನೆರವೇರಿಸಿದರು.

UNCG














