ನವದೆಹಲಿ:ಬಂಗಾಳಕೊಲ್ಲಿಯಲ್ಲಿ ನವೆಂಬರ್ 13ರಂದು ಹೊಸ ವಾಯುಭಾರ ಕುಸಿತ ಉಂಟಾಗಿದೆ. ಈ ವಾಯುಭಾರ ಕುಸಿತದ ಪರಿಣಾಮ ವಿವಿಧೆಡೆ ಮಳೆಯಾಗುವ ಸಾಧ್ಯತೆ ಇದೆ. ವಾಯುಭಾರ ಕುಸಿತವು ಮುಂದಿನ ದಿನಗಳಲ್ಲಿ ತೀವ್ರಗೊಂಡು
‘ಅಕ್ವನ್’ ಎಂಬ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ನವೆಂಬರ್ 16ರ ಸಂಜೆ ವೇಳೆ ಈ ಚಂಡಮಾರುತವು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಇದರ ಪ್ರಭಾವದಿಂದ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಭಾಗಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಿ, ಗುಡುಗು-ಸಿಡಿಲು ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣ ಅಥವಾ ತುಂತುರು,ಸಣ್ಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.














