ಸುಳ್ಯ:ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ಅನುದಾನ ಬಿಡುಗಡೆಯಾಗಿದ್ದು ಶಾಸಕಿ ಭಾಗೀರಥಿ ಮುರುಳ್ಯ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು. ಆ ಮೂಲಕ ಒಂದೇ ಕಾಮಗಾರಿಗೆ ಒಂದೇ ದಿನ ಎರಡು ಬಾರಿ ಗುದ್ದಲಿ ಪೂಜೆ ನಡೆದಂತಾಗಿದೆ. ಇಂದು ಬೆಳಿಗ್ಗೆ ಇದೇ ಕಾಮಗಾರಿಗೆ
ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಗುದ್ದಲಿಪೂಜೆ ನೆರವೇರಿಸಿದ್ದರು.
ಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಕೈಗೊಳ್ಳಬೇಕಾದ 5 ಸೇತುವೆಗಳ ಪುನರ್ ನಿರ್ಮಾಣಕ್ಕೆ ಅನುದಾನ ಒದಗಿಸಿ ಕೊಡುವಂತೆ ಲೋಕೋಪಯೋಗಿ ಸಚಿವರಿಗೆ ಮನವಿಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ
ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪ ಅವರ ಪ್ರಯತ್ನದ ಮೇರೆಗೆ ಅನುದಾನ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಬೆಳಿಗ್ಗೆ ಕಾಂಗ್ರೆಸ್ಸಿಗರು ಗುದ್ದಲಿಪೂಜೆ ನೆರವೇರಿಸಿದರೆ,
ಸಂಜೆ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಬಿಜೆಪಿ ಮುಖಂಡರಾದ ಎ.ವಿ.ತೀರ್ಥರಾಮ, ಕೃಷ್ಣಯ್ಯ ಮೂಲೆತೋಟ, ವಿನಯ ಮುಳುಗಾಡು, ಚಂದ್ರಹಾಸ ಶಿವಾಲ, ಹಿಮ್ಮತ್ ಸೇರಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.














