ಮಂಡೆಕೋಲು:ಜನರು ಸ್ವಾವಲಂಬಿಯಾಗಿ ಬದುಕಲು ಸಹಕಾರ ಸಂಘಗಳು ಭದ್ರ ಆರ್ಥಿಕ ಅಡಿಪಾಯವನ್ನು ಒದಗಿಸಿ ಕೊಟ್ಟಿದೆ.ಸಹಕಾರ ಸಪ್ತಾಹ ಸಹಕಾರ ಕ್ಷೇತ್ರದ ಹಬ್ಬ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ಸುಳ್ಯ ತಾಲೂಕು
ಸಹಕಾರಿ ಯೂನಿಯನ್, ಸುಳ್ಯ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ ಜಿಲ್ಲಾ ಮಟ್ಟದ 73ನೇ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಎಲ್ಲಾ ಅಗತ್ಯತೆಗಳಿಗೆ ಆರ್ಥಿಕ ಸಹಕಾರವನ್ನು ನೀಡುವ ಮೂಲಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ, ರೈತರ ಜೊತೆ ಕೈ ಜೋಡಿಸುವ ಮೂಲಕ ಸಹಕಾರ ಸಂಘಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದರು. ಸದಸ್ಯರೇ ಪ್ರತಿ ಸಹಕಾರ ಸಂಘದ ಬೆನ್ನೆಲುಬು ಎಂದು ಅವರು ಅಭಿಪ್ರಾಯಪಟ್ಟರು. ಸಮಾರಂಭದ

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ‘ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಹಕಾರ ಕ್ಷೇತ್ರ ದೊಡ್ಡ ಕೊಡುಗೆ ನೀಡಿದೆ. ಸಹಕಾರ ಸಂಘಗಳು ಬೆಳೆದು ಜನ ಮಾನಸದಲ್ಲಿ ನೆಲೆಯಾಗಿ ಪ್ರತಿ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಿದೆ. ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ದೊಡ್ಡ ಕೊಡುಗೆ ನೀಡಿದೆ ಎಂದ ಅವರು ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ, ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಲು ಸಹಕಾರ ಸಪ್ತಾಹ ಸಹಾಯಕ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ
ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಸಪ್ತಾಹದ ಜಾಥಾ ಉದ್ಘಾಟಿಸಿ ಮಾತನಾಡಿ’ ತಾನು ಬೆಳೆಯುವುದರ ಜೊತೆಗೆ ಇತರರನ್ನೂ ಕೈ ಹಿಡಿದು ಮೇಲೆತ್ತುವ ಕ್ಷೇತ್ರ ಸಹಕಾರ ಕ್ಷೇತ್ರ.ಸಹಕಾರ ಕ್ಷೇತ್ರ ಇಂದು ಮನೆ ಮನೆ ತಲುಪಿದೆ ಎಂದು ಹೇಳಿದರು.
ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ

ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಪುತ್ತೂರು ಸೈಂಟ್ ಫಿಲೋಮಿನ ಕಾಲೇಜು ಸಹಾಯಕ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಉಪನ್ಯಾಸ ನೀಡಿದರು. 2027ನೇ ಸಾಲಿನ ಕ್ಯಾಲೆಂಡರ್ನ್ನು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ಬಿಡುಗಡೆ ಮಾಡಿದರು. ಮಂಡೆಕೋಲು ಸಹಕಾರ ಸಂಘದ ಲೋಗೋವನ್ನು ಶಾಸಕಿ ಭಾಗೀರಥಿ ಮುರುಳ್ಯ ಬಿಡುಗಡೆ ಮಾಡಿದರು.ಇದೇ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ
ಎ.ವಿ.ತೀರ್ಥರಾಮ,ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಭಾಕರ ನಾಯಕ್, ಡಿಸಿಸಿ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥನ್ ನಾಯರ್, ಮಂಗಳೂರು ಲೆಕ್ಕ ಪರಿಶೋಧನಾ ಇಲಾಖೆಯ ಸಹಕಾರ ಸಂಘಗಳ ನಿವೃತ್ತ ಹಿರಿಯ ಉಪನಿರ್ದೇಶಕ ಬಾಲಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಯಿತು. ಸಹಕಾರ ಕೇತ್ರದಲ್ಲಿ

ಸಾಧನೆಗೈದ ಸಾಧಕರಿಗೆ, ಮತ್ತು ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಮತ್ತು ಸುಳ್ಯ ತಾಲೂಕಿನಲ್ಲಿ 2025 – 26ನೇ ಸಾಲಿನಲ್ಲಿ ನಿವೃತ್ತರಾದ ಸಿಬ್ಬಂದಿಗಳಿಗೆ ಗೌರವಾರ್ಪಣೆ ಮಾಡಲಾಯಿತು.ಶಶಿಕುಮಾರ್ ರೈ ಬಾಲ್ಯೋಟ್ಟು ಅವರನ್ನು ಸನ್ಮಾನಿಸಲಾಯಿತು.
ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಿಷ್ಣು ಭಟ್ ಮೂಲೆತೋಟ,ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕ ಎಸ್.ಎಂ.ರಘು, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ರತನ್.ಕೆ.ಎಸ್ ಉಪಸ್ಥಿತರಿದ್ದರು.ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ

ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಪಾಧ್ಯಕ್ಷ ಪುರುಷೋತ್ತಮ ಕಾಡುಸೊರಂಜ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್.ಜಿ, ನಿರ್ದೇಶಕರಾದ ಕೇಶವ ಮೂರ್ತಿ ಹೆಬ್ಬಾರ್, ಲಕ್ಷ್ಮಣ ಉಗ್ರಾಣಿಮನೆ,ಲಿಂಗಪ್ಪ ಗೌಡ ಬದಿಕಾನ, ಉಮೇಶ ಮಂಡೆಕೋಲು, ಆಶಿಕ್ ದೇವರಗುಂಡ,ರಾಜಣ್ಣ ಎಂ.ಕೆ, ಶಶೀಧರ ಕೆ, ಸದಾನಂದ ಮಡಿವಾಳಮೂಲೆ, ತುಳಸಿನಿ ದೇವರಗುಂಡ, ಜಯಶ್ರೀ ಸಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದಯಕುಮಾರ್ ಜಿ ಕ್ರೀಡಾಕೂಟದ ವಿಜೇತರ ಪಟ್ಟಿ ವಾಚಿಸಿದರು.
ಸಮಾರಂಭಕ್ಕೆ ಮುನ್ನ
ಆಕರ್ಷಕ ಜಾಥಾ ನಡೆಯಿತು.ಜಾಥಾಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ತೆಂಗಿನ ಕಾಯಿ ಒಡೆದು, ಸಹಕಾರ ಧ್ವಜ ಬೀಸಿ ಚಾಲನೆ ನೀಡಿದರು.ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಧ್ವಜಾರೋಹಣ ನೆರವೇರಿಸಿದರು.














