ಸುಳ್ಯ:ಎಸ್ಐಆರ್ ಪ್ರಕ್ರಿಯೆಯ ಲೋಪ ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಎಸ್ಕೆಎಸ್ಎಸ್ಎಫ್ ಸುಳ್ಯ ವಲಯದ ವತಿಯಿಂದ ನ.13ರಂದು ಸಂಜೆ 4 ಗಂಟೆಗೆ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ
ಪ್ರತಿಭಟನೆ ನಡೆಯಲಿದೆ ಎಂದು ಎಸ್ಕೆಎಸ್ಎಸ್ಎಫ್ ಸುಳ್ಯ ವಲಯ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಲಯ ಉಪಾಧ್ಯಕ್ಷ ಅಹ್ಮದ್ ನಹೀಂ ಫೈಝಿ ಎಸ್ಕೆಎಸ್ಎಸ್ಎಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ರಾಜ್ಯದ 100 ತಾಲೂಕು ಕೇಂದ್ರಗಳಲ್ಲಿ ನ.13 ರಂದು ಏಕಕಾಲದಲ್ಲಿ ಪ್ರತಿಭಟನೆ ನಡೆಸಲಿದೆ. ಇದರ ಅಂಗವಾಗಿ ಸುಳ್ಯದಲ್ಲಿಯೂ ಪ್ರತಿಭಟನೆ ನಡೆಯಲಿದೆ.ಎಸ್ಐಆರ್ ಅಕ್ರಮಗಳು ಮತ್ತು ಲೋಪದೋಷಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಮತದಾರರಿಗೆ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಾದ ಸಮಯ, ಮಾಹಿತಿ ಮತ್ತು ಸೂಕ್ತ ಅವಕಾಶ ಒದಗಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಪ್ರಕರಣಗಳ ಕುರಿತು ಪಾರದರ್ಶಕವಾಗಿ ಮರುಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಎಸ್ಎಫ್ ವಲಯ ಅಧ್ಯಕ್ಷ ಅಕ್ಬರ್ ಕರಾವಳಿ, ಪ್ರಧಾನ ಕಾರ್ಯದರ್ಶಿ ರಫೀಕ್ ಹನೀಫಿ ಅಜ್ಜಾವರ, ಉಪಾಧ್ಯಕ್ಷ ಅಬೂಬಕ್ಕರ್ ಪೂಪಿ ಕನಕಮಜಲು, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಸುಳ್ಯ ಕ್ಲಸ್ಟರ್ ಸಂಘಟನಾ ಕಾರ್ಯದರ್ಶಿ ಇ.ಕೆ.ಮೊಯಿದೀನ್ ಸುಣ್ಣಮೂಲೆ ಉಪಸ್ಥಿತರಿದ್ದರು.
































