ಸುಳ್ಯ:ನಮ್ಮ ಜೀವಿತ ಅವಧಿಯಲ್ಲಿ ಒಂದು ದೇವಸ್ಥಾನ ನಿರ್ಮಾಣವಾಗುವುದು ಮತ್ತು ನಾವು ಅದರಲ್ಲಿ ಭಾಗಿಗಳಾಗುವುದು ನಮ್ಮ ಜೀವನದ ಪುಣ್ಯ. ಆದುದರಿಂದ ನಮ್ಮೂರಿನ ದೇವಸ್ಥಾನದ ಅಭಿವೃದ್ಧಿಯಲ್ಲಿ ಭಾಗಿಗಳಾಗುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.ಸುಳ್ಯ ತಾಲೂಕಿನ
ಬೆಳ್ಳಾರೆಯ ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸುವುದು ನಮಗೆ ದೇವಿ ನೀಡಿದ ಅಪೂರ್ವ ಅವಕಾಶ. ಪ್ರಶಾಂತ ಸುಂದರ ವಾತಾವರಣದ ಪ್ರಕೃತಿಯ ಮಧ್ಯೆ ನಿರ್ಮಾಣಗೊಳ್ಳುವ ದೇವಸ್ಥಾನವು ಇಡೀ ನಾಡಿಗೆ ಐಶ್ವರ್ಯ,ಸಮೃದ್ಧಿ ತರಲಿದೆ ಎಂದು ಅವರು ಹೇಳಿದರು.

ಕುಂಬಳೆ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಕೆ. ಶೆಟ್ಟಿ ಮಾತನಾಡಿ’ಊರಿನ ದೇವಸ್ಥಾನ ಅಭಿವೃದ್ಧಿ ಆದರೆ ಇಡೀ ಊರೇ ಅಭಿವೃದ್ಧಿ ಆದಂತೆ. ದೇವಸ್ಥಾನ ನಿರ್ಮಾಣ ಮಾಡಯವುದರ ಜೊತೆಗೆ ದೇವಾಲಯದ ನಿರ್ವಹಣೆ ಮತ್ತು ಪರಿಪಾಲನೆ ಕೂಡ ಅಷ್ಟೇ ಮುಖ್ಯ ಎಂದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ದೇವಾಲಯಗಳ ಅಭಿವೃದ್ಧಿಗೆ ಮತ್ತು ಧಾರ್ಮಿಕ ಕ್ಷೆತ್ರಕ್ಕೆ ನಾವು ನೀಡುವ ಕೊಡುಗೆ ಶತಮಾನಗಳ ಕಾಲ ನೆನಪಿಸಿಕೊಳ್ಳುತ್ತದೆ. ನಾವು ಸಂಪಾದನೆ ಮಾಡುವ ಗಳಿಕೆಯ ಒಂದಂಶವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಸಮಾಜಕ್ಕೆ ಅರ್ಪಿಸಿದರೆ ನಮ್ಮ ಜೀವನ ಸಾರ್ಥಕ ಆಗುತ್ತದೆ ಎಂದು ಅವರು ಹೇಳಿದರು.
ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಆಳ್ವ ಮಡ್ವ ಮಾತನಾಡಿದರು.
ಗೌರೀಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು ಅಧ್ಯಕ್ಷತೆ ವಹಿಸಿದ್ದರು.
ಜೀರ್ಣೋದ್ಧಾರ ಸಮಿತಿಯ

ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ್ ಪಂಜಿಗಾರು, ಕಾರ್ಯಾಧ್ಯಕ್ಷರಾದ ಆರ್.ಕೆ.ಭಟ್ ಕುರುಂಬುಡೇಲು, ದೇವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಸಿ,ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು, ಮಾತೃ ಮಂಡಳಿ ಅಧ್ಯಕ್ಷೆ ಪೂರ್ಣಿಮಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಈಶ್ವರ ವಾರಣಾಸಿ ಸ್ವಾಗತಿಸಿದರು.ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು.ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ಜೀರ್ಣೋದ್ಧಾರ ಸಮಿತಿ ಸದಸ್ಯ ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸ್ವಾಮೀಜಿ ಹಾಗು ಗಣ್ಯರು ವೀಕ್ಷಿಸಿದರು.








