ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ದೇವಳದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ರಾಜು ಕೆ.ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಾತ್ರೋತ್ಸವದ ಸಿದ್ಧತೆ ಕುರಿತು ಚರ್ಚಿಸಲಾಯಿತು. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ
ಕ್ರಮ ವಹಿಸಬೇಕು. ಭಕ್ತರ ಅನುಕೂಲಕ್ಕೆ ಹೆಚ್ಚುವರಿ ಸರಕಾರಿ ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಆದೇಶಿಸಿದರು.ಲಕ್ಷ ದೀಪೋತ್ಸವದ ನಿರ್ವಹಣೆಗೆ ನೋಡೆಲ್ ಅಧಿಕಾರಿಯನ್ನು ನೇಮಿಸಲು ಎಡಿಸಿ ಸೂಚಿಸಿದರು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಸುರಕ್ಷತೆ ಹಾಗೂ ಸೌಲಭ್ಯಗಳಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬಂದೋಬಸ್ತ್ ವ್ಯವಸ್ಥೆ, ಹೆಚ್ಚುವರಿ ಸಿಬ್ಬಂದಿಗಳ ನೇಮಕ, ಹೊರರೋಗಿ ಘಟಕ, ನಿರಂತರ ವಿದ್ಯುತ್ ಸರಬರಾಜು, ರಸ್ತೆಗಳ ಸುಸ್ಥಿತಿ ಕಾಪಾಡುವುದು, ನೀರು ಸರಬರಾಜು, ಪಾರ್ಕಿಂಗ್, ಕುಮಾರಧಾರ ಸ್ನಾನಘಟ್ಟದಲ್ಲಿ ಹೂಳೆತ್ತುವ ಕಾರ್ಯ, ಕುಣಿತ ಭಜನೆ, ಸ್ವಯಂಸೇವಕರ ನಿಯೋಜನೆ, ವಿಶೇಷ ಭೋಜನ ವ್ಯವಸ್ಥೆ, ಪ್ರಸಾದ ಭೋಜನ ವ್ಯವಸ್ಥೆ,ಶುಚಿತ್ವ, ಸಂತೆ ವ್ಯಾಪಾರ, ಕೃಷಿ ಮೇಳ, ಸುಡುಮದ್ದು ಪ್ರದರ್ಶನ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್.ಎಸ್. ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಪ್ರವೀಣ ರೈ ಮರುವಂಜ, ಲೀಲಾಮನಮೋಹನ್,ಅಜಿತ್ ಕುಮಾರ್ ಪಾಲೇರಿ, ಸೌಮ್ಯ ಭರತ್, ಡಿವೈಎಸ್ಪಿ ಪ್ರಮೋದ್ ಕುಮಾರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಲೋಕೋಪಯೋಗಿ ಎಇಇ ಶ್ರೀಕಾಂತ್, ಠಾಣಾಧಿಕಾರಿ ಆಂಜನೇಯ ರೆಡ್ಡಿ, ವಲಯಾರಣ್ಯಧಿಕಾರಿ ಚೇತನ್, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಆಲ್ಕಬೆ, ಪವನ್ ಎಂ.ಡಿ ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ.ಅಧಿಕಾರಿಗಳು, ದೇವಳದ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
















