ಸುಳ್ಯ:ಪೆರಾಜೆ ಗ್ರಾಮದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ದುಸ್ತರವಾಗಿದೆ. ಗ್ರಾಮದ ರಸ್ತೆಗಳ ದುರವಸ್ಥೆಯನ್ನು ವಿರೋಧಿಸಿ, ರಸ್ತೆಗಳ ಮರು ಡಾಮರೀಕರಣ ಮತ್ತು ಅಭಿವೃದ್ಧಿ ಆಗ್ರಹಿಸಿ ಪೆರಾಜೆಯ ಹಿತರಕ್ಷಣಾ ವೇದಿಕೆಯ ವತಿಯಿಂದ ಡಿ.1ರಂದು ಪೂ.10ರಿಂದ 12 ಗಂಟೆಯ ತನಕ ಪೆರಾಜೆ ಕಾಸ್ಪಾಡಿ ಜಂಕ್ಷನ್ನಲ್ಲಿ
ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಸಂಚಾಲಕ ಅಶೋಕ ಪೀಚೆ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರಾಜೆ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳಾದ ಪೆರಾಜೆ-ಕಾಸ್ಪಾಡಿ-ಗಡಿಗುಡ್ಡೆ, ದೊಡ್ಡಡ್ಕ-ನೆಡ್ಚಿಲ್- ಕಾಪುಮಲೆ, ಪೆರಾಜೆ- ದೇವಸ್ಥಾನ- ಮೂಲೆಮಜಲು- ಅಮೆಚೂರು ರಸ್ತೆ, ಪುತ್ಯ-ಪೆರಾಜೆ, ಕಾಫಿತೋಟ, ವ್ಯಾಪಾರೆ ರಸ್ತೆ, ನಿಡ್ಯಮಲೆ ರಸ್ತೆ, ಕುಂದಲ್ಪಾಡಿ-ಬಾಳೆಕಜೆ ರಸ್ತೆಗಳು ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಚರಂಡಿಗಳು ಇಲ್ಲದಾಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ರಸ್ತೆ ಬದಿಯ ಕಾಡು ಕೂಡ ಕಡಿಯುವುದಿಲ್ಲ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ರಸ್ತೆ ಅಭಿವೃದ್ಧಿಯ ಭರವಸೆ ನೀಡುತ್ತಾರೆಯೇ ಹೊರತು ರಸ್ತೆ ಅಭಿವೃದ್ಧಿ ಕಾಣುವುದಿಲ್ಲ. ಈ ಹಿನ್ನಲೆಯಲ್ಲಿ

ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ- ಸಂಸ್ಥೆಗಳು, ಸಾರ್ವಜನಿಕರು ಮೌನ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಮೌನ ಪ್ರತಿಭಟನೆ ನಡೆಸಿ ರಸ್ತೆ ದುರಸ್ತಿ ನಡೆಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ರಸ್ತೆ ದುರಸ್ಥಿ ಮಾಡದೇ ಇದ್ದರೆ ಹಿತರಕ್ಷಣಾ ವೇದಿಕೆ ವತಿಯಿಂದ ಜನವರಿ ತಿಂಗಳಲ್ಲಿ ಪೆರಾಜೆಯಿಂದ ಮಡಿಕೇರಿ ತನಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅಶೋಕ್ ಪೀಚೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ರಾಮಕೃಷ್ಣ ಮಾಣಿಲತ್ತಾಯ,ಉಪಾಧ್ಯಕ್ಷ ಹೂವಪ್ಪ ಗೌಡ,ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶರತ್ ಬೊಳುಂಜ, ಕಾರ್ಯದರ್ಶಿ ಪ್ರಸಾದ್ ನಡುಬೈಲ್, ಸದಸ್ಯ ಘನಶ್ಯಾಮ್ ದೊಡ್ಡಡ್ಕ ಉಪಸ್ಥಿತರಿದ್ದರು.
















