ಸುಳ್ಯ: ಅವಧಿ ಮುಗಿದು ಸುಮಾರು ಐದೂವರೆ ವರ್ಷಗಳ ಬಳಿಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಅಖಡಾ ಸಿದ್ಧಗೊಳ್ಳುತ್ತಿದ್ದು ಕ್ಷೇತ್ರವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ಆ ಮೂಲಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕೆಲವೇ ಚುನಾವಣೆಯ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಜನವರಿ ಪ್ರಥಮ ಅಥವಾ ದ್ವಿತೀಯ ವಾರದಲ್ಲಿ ತಾಲೂಕು ಪಂಚಾಯತ್ ಮತ್ತು
ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದೀಗ ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟಿಸಿರುವ ಕಾರಣ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.ಯಾವ ಕ್ಷೇತ್ರಗಳಲ್ಲಿ ಯಾರಿಗೆ ಅವಕಾಶ ಲಭಿಸಲಿದೆ, ಯಾರು ಅಭ್ಯರ್ಥಿಗಳಾಗಲಿದ್ದಾರೆ ಎಂಬ ಚರ್ಚೆಗಳು ಆರಂಭಗೊಂಡಿದೆ.ಹಲವು ಮಂದಿ ಆಕಾಂಕ್ಷಿಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆಯನ್ನು ಅ.9ಕ್ಕೆ ಪ್ರಕಟಿಸಿತ್ತು. ಬಳಿಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಗತ್ಯ ಬದಲಾವಣೆಯೊಂದಿಗೆ ಅಂತಿಮ ಮೀಸಲಾತಿ ಪ್ರಕಟಿಸಿದೆ. ಸುಳ್ಯ ತಾಲೂಕಿನಲ್ಲಿ
3 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, 11 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ. ಈ ಹಿಂದೆ ಸುಳ್ಯದಲ್ಲಿ ನಾಲ್ಕು ಜಿಲ್ಲಾ ಪಂಚಾಯತ್ ಮತ್ತು 13 ತಾಲೂಕು ಪಂಚಾಯತ್ ಕ್ಷೇತ್ರಗಳಿತ್ತು. ಕಡಬ ತಾಲೂಕು ರಚನೆಯಾದ ಬಳಿಕ ಸುಳ್ಯ ತಾಲೂಕಿನ ಕೆಲವು ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಗೊಂಡಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಕ್ಷೇತ್ರಗಳು ಪುನರ್ ವಿಂಗಡಣೆಯಾಗಿ ಜಿ.ಪಂ.ಕ್ಷೇತ್ರಗಳ ಸಂಖ್ಯೆ 3ಕ್ಕೆ ಮತ್ತು ತಾ.ಪಂ.ಕ್ಷೇತ್ರ 11ಕ್ಕೆ ಇಳಿಕೆಯಾಗಿದೆ. ಹಿಂದೆ ಇದ್ದ ಅರಂತೋಡು ಜಿ.ಪಂ.ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಕಡಿಮೆಯಾಗಿದೆ. ಎಡಮಂಗಲ ಮತ್ತು ಸುಬ್ರಹ್ಮಣ್ಯ ತಾ.ಪಂ.ಕ್ಷೇತ್ರದ ಭಾಗವಾಗಿದ್ದ ಪ್ರದೇಶಗಳು ಕಡಬಕ್ಕೆ ಸೇರಿದೆ.
ಜಿ.ಪಂ.ಕ್ಷೇತ್ರಗಳಲ್ಲಿ ಬೆಳ್ಳಾರೆ ಮತ್ತು ಗುತ್ತಿಗಾರು ಸಾಮಾನ್ಯ ಮಹಿಳೆಗೆ ಮತ್ತು ಜಾಲ್ಸೂರು ಜಿ.ಪಂ.ಕ್ಷೇತ್ರ ಸಾಮಾನ್ಯಕ್ಕೆ ಮೀಸಲಾಗಿರುವ ಕಾರಣ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಹೋರಾಟ ಕಂಡು ಬರುವ ನಿರೀಕ್ಷೆ ಇದೆ. ಅದರಲ್ಲಿಯೂ ಸಾಮಾನ್ಯಕ್ಕೆ ಮೀಸಲಾಗಿರುವ ಜಾಲ್ಸೂರು ಬಿರುಸಿನ ಕಣವಾಗಿ ಮಾರ್ಪಾಡಾಗಲಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಮುಖರು ಈ ಕ್ಷೇತ್ರಕ್ಕೆ ಕಣ್ಣಿಟ್ಟಿರುವ ಕಾರಣ ಅಭ್ಯರ್ಥಿ ತನಕ್ಕೆ ಸ್ಪರ್ಧೆ ಏರ್ಪಡಬಹುದು. ಬೆಳ್ಳಾರೆ ಮತ್ತು ಗುತ್ತಿಗಾರಿನಲ್ಲಿ ಮಹಿಳಾ ನಾಯಕಿಯರ ಮಧ್ಯೆ ಸ್ಪರ್ಧೆ ಏರ್ಪಡಲಿದ್ದು ಹಲವು ಮಂದಿ ನಾಯಕಿಯರು ಅಭ್ಯರ್ಥಿತನದ ನಿರೀಕ್ಷೆಯಲ್ಲಿದ್ದಾರೆ.ಗುತ್ತಿಗಾರು ಜಿ.ಪಂ.ಕ್ಷೇತ್ರ ಕರಡು ಪಟ್ಟಿಯಲ್ಲಿ ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಾಗಿತ್ತು. ಇದೀಗ ಸಾಮಾನ್ಯ ಮಹಿಳೆ ವಿಭಾಗಕ್ಕೆ ನೀಡಲಾಗಿರುವುದು ಹಿಂದುಳಿದ ವರ್ಗ ಎ ಕೆಟಗರಿಗೆ ಸೇರಿದ ಹಲವರಿಗೆ ನಿರಾಸೆ ತಂದಿದೆ.
ಸುಳ್ಯ ತಾಲೂಕು ಪಂಚಾಯತ್ನಲ್ಲಿ 11 ಸ್ಥಾನಗಳಿದ್ದು 6 ಸ್ಥಾನ ಮಹಿಳೆಗೆ ಮೀಸಲಾಗಿದೆ.ಸಾಮಾನ್ಯ ವರ್ಗಕ್ಕೆ 6 ಸ್ಥಾನ ಇದೆ(3 ಮಹಿಳೆ), ಅನುಸೂಚಿತ ಜಾತಿ 2(1ಮಹಿಳೆ), ಅನುಸೂಚಿತ ಪಂಗಡ1(ಮಹಿಳೆ), ಹಿಂದುಳಿದ ವರ್ಗ ಎ 2(1 ಮಹಿಳೆ) ಎಂಬಂತೆ ಮೀಸಲಾತಿ ಪ್ರಕಟವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಐವರ್ನಾಡು, ಮಡಪ್ಪಾಡಿ,ಪಂಜ ಕ್ಷೇತ್ರಗಳು ಚುನಾವಣೆಯಲ್ಲಿ ಶ್ರದ್ಧಾ ಕಣವಾಗಲಿದೆ ಎಂಬುದರ ಜೊತೆಗೆ ಇಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಗಮನ ಸೆಳೆಯಲಿದೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿರುವ ಜಾಲ್ಸೂರು, ಬಾಳಿಲ,ನೆಲ್ಲೂರು ಕೆಮ್ರಾಜೆ ಕ್ಷೇತ್ರಗಳು ಬಿರುಸಿನ ಕಣವಾಗಲಿದೆ. ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಾದ ಗುತ್ತಿಗಾರು,ಹಿಂದುಳಿದ ವರ್ಗ ಎ ಮಹಿಳೆ ವಿಭಾಗಕ್ಕೆ ಮೀಸಲಾದ ಅರಂತೋಡು ಕೂಡ ಪೈಪೋಟಿ ನಿರೀಕ್ಷೆಯಲ್ಲಿದೆ.ತಾಲೂಕು ಪಂಚಾಯತ್ ಮೀಸಲಾತಿಯಲ್ಲಿ
ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ ಯಾವುದೇ ಬದಲಾವಣೆ ಆಗಿಲ್ಲ ಎಂಬ ವಿಶೇಷತೆಯೂ ಇದೆ. ಸುಳ್ಯ, ತಾಲೂಕಿನಲ್ಲಿ ಜಿಲ್ಲಾ ಪಂಚಾಯತ್ ಮತ್ರು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಸ್ಪರ್ಧೆ ಏರ್ಪಡಲಿದೆ. ಇತರ ಪಕ್ಷಗಳು, ಪಕ್ಷೇತರರು ಕಣದಲ್ಲಿ ಇರಬಹುದು. ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಕುರಿತ ಚರ್ಚೆಗಳು ಇನ್ನೂ ಆರಂಭಿಸಿಲ್ಲ. ಅಭ್ಯರ್ಥಿಗಳ ಪೈಪೋಟಿಯನ್ನು ಮೀರಿ ಸೂಕ್ತ ಅಭ್ಯರ್ಥಿಗಳ ಆಯ್ಕೆಯ ಜೊತೆಗೆ ಪ್ರತಿ ಕ್ಷೇತ್ರದಲ್ಲಿಯೂ ಸೂಕ್ತ ಮತ್ತು ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದ ಸವಾಲು ಕೂಡ ಪಕ್ಷದ ನೇತೃತ್ವದ ಮುಂದಿದೆ.
















