ಸುಳ್ಯ:ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆ ನಡೆಸಲು ಸರಕಾರ ಆದೇಶ ನೀಡಿದ್ದು ತರಬೇತಿ ಕೂಡ ನೀಡಲಾಗಿದೆ.ಸದ್ಯದಲ್ಲಿಯೇ
ಮರುಪರಿಶೀಲನೆ ಆರಂಭಗೊಳ್ಳಲಿದೆ ಎಂದು ಅನುಷ್ಠಾನ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಹಿತಿ ನೀಡಿದರು. ಸುಳ್ಯದಲ್ಲಿ 232 ಮೃತಪಟ್ಟ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿತ್ತು. ಇದರ ಪರಿಶೀಲನೆ ನಡೆಸಿ 138 ಫಲಾನುಭವಿಗಳ ಖಾತೆಯಿಂದ ಹಣ ಮರು ಪಾವತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮರು ಪಾವತಿಗೆ ಬಾಕಿ ಇರುವ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಗ್ಯಾರಂಟಿ ಸಮಿತಿ ಸದಸ್ಯರಿಗೆ ನೀಡುವಂತೆ ಅಧ್ಯಕ್ಷರು ಹಾಗು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ ನೀಡಿದರು.
ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ನಿರಂತರ ವಿದ್ಯುತ್ ಕಡಿತ ಆಗುತಿದೆ. ಬೆಳ್ಳಾರೆ-ಸುಳ್ಯ 33 ಕೆವಿ ಭೂಗರ್ಭ ಕೇಬಲ್ ಮೂಲಕ ವಿದ್ಯುತ್ ಸರಬರಾಜು ಯಾಕೆ ಆಗುತ್ತಿಲ್ಲ ಎಂದು ಗ್ಯಾರಂಟಿ ಸಮಿತಿ ಸದಸ್ಯ ಸುರೇಶ್ ಎಂ.ಎಚ್. ಪ್ರಶ್ನಿಸಿದರು. ಭೂಗರ್ಭ ಕೇಬಲ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನು ಪರಿಶೀಲಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಲು ಗಮನ ಹರಿಸಬೇಕು ಎಂದು ಅಧ್ಯಕ್ಷರು ಹೇಳಿದರು.
ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಇವೆ ಎಂದು ಸದಸ್ಯ ಪ್ರಶಾಂತ್ ರೈ ಮರುವಂಜ ಹೇಳಿದರು. ಪಡಿತರ ಅಕ್ಕಿ ಮಾರಾಟ ಮಾಡುವುದು ಕಂಡು ಬಂದರೆ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹೊಸ ಪಡಿತರ ಚೀಟಿ ಆಗದೇ ಇರುವುದರಿಂದ ಜನರಿಗೆ ಸಮಸ್ಯೆ ಆಗಿದೆ ಎಂದು ಜಂಶೀರ್ ಶಾಲೆಕ್ಕಾರ್ ಸಭೆಯ ಗಮನ ಸೆಳೆದರು.
ವಿದ್ಯಾರ್ಥಿಗಳು ಹಾಗು ಸಾರ್ವಜನಿಕರ ಪ್ರಯಾಣದ ಸೌಲಭ್ಯದ ಹಿತ ದೃಷ್ಠಿಯಿಂದ ಸುಳ್ಯದಿಂದ ಪುತ್ತೂರಿಗೆ ಬೆಳಿಗ್ಗೆ 8 ಗಂಟೆ, 8.30ರ ಮಧ್ಯೆ ಹೆಚ್ಚುವರಿ ಬಸ್ ಒದಗಿಸಬೇಕು ಎಂದು ತಿರುಮಲೇಶ್ವರಿ ಅಡ್ಕಾರ್ ಹೇಳಿದರು.ಸುಳ್ಯ- ಕೊಡಿಯಾಲಬೈಲು- ದುಗ್ಗಲಡ್ಕ ಮಾರ್ಗದಲ್ಲಿ ಬಸ್ ಸರ್ವೀಸ್ ಆರಂಭಿಸಿ ನಿಲ್ಲಿಸಿರುವುದರ ಬಗ್ಗೆ ಚರ್ಚೆ ನಡೆಯಿತು. ಅಗಲ ಕಿರಿದಾದ ಮತ್ತು ರಸ್ತೆಯ ದುರವಸ್ಥೆಯ ಕಾರಣ ಬಸ್ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ತಿಳಿಸಲಾಯಿತು. ರಸ್ತೆ ಸದ್ಯದಲ್ಲಿಯೇ ಅಭಿವೃದ್ಧಿ ಕಾಣಲಿದ್ದು ಆದ ಬಳಿಕ ಬಸ್ ಸರ್ವೀಸ್ ಆರಂಭಗೊಳ್ಳಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ ತಿಳಿಸಿದರು.
ಗ್ಯಾರಂಟಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು. ಗ್ಯಾರಂಟಿ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.








