ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ 3ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ನ.29ರಂದು ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅರೆಭಾಷೆ ಮತ್ತು
ಅರೆಭಾಷೆ ಸಂಸ್ಕೃತಿ ಆಚಾರ ವಿಚಾರಗಳು ಮರೆತು ಹೋಗದಂತೆ ಹಾಗೂ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಭಾಷೆಯನ್ನು ಕೊಂಡೊಯ್ಯಲು ಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಅಕಾಡೆಮಿಯು ಹಮ್ಮಿಕೊಂಡಿದೆ.ನ.29 ರಂದು ಬೆಳಗ್ಗೆ 8.30ಕ್ಕೆ ‘ಸಂಪಾಜೆ ಗೇಟ್’ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡುವುದರೊಂದಿಗೆ ಉತ್ಸವ ಆರಂಭಗೊಳ್ಳುತ್ತದೆ. ಪ್ರಗತಿಪರ ಕೃಷಿಕರಾದ ಇಂದಿರಾ ದೇವಿಪ್ರಸಾದ್ ಸಂಪಾಜೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಮತ್ತು ಲೇಖಕರಾದ ಲೀಲಾ ದಾಮೋದರ ಕುಂದಾಲ್ಪಾಡಿ ಅವರು ಸಮ್ಮೇಳನದ

ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸೂರಜ್ ಹೊಸೂರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಸ್ವಾಗತ ಮತ್ತು ಪ್ರಸ್ತಾವನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದಿನ ಸಮ್ಮೇಳನಾಧ್ಯಕ್ಷರು ಮತ್ತು ಕವಿ ಭವಾನಿಶಂಕರ ಹೊದ್ದೆಟ್ಟಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತ್ ಎನ್.ಸಿ ಊರುಬೈಲು, ದ.ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ,ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ,ಸುಳ್ಯ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಡ್ಕ ಇದರ ಮುಖ್ಯ ಶಿಕ್ಷಕಿ ಜಯಂತಿ ಸೋಮಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ಎನ್ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ವಿಚಾರ ಸಂಕಿರಣ ನಡೆಯಲಿದೆ. ‘ಕೃಷಿ ಬೊದ್ಕು ಮತ್ತು ಅದರ ಪ್ರಸ್ತುತ ಸವಾಲ್ಗ’ ಎಂಬ ವಿಷಯದ ಕುರಿತು ಕಲ್ಮಡ್ಕದ ಕೃಷಿಕರಾದ ಸುರೇಶ್ಚಂದ್ರ ಟಿ.ಆರ್ ಹಾಗೂ ‘ಭಾಷೆನ ಮುಂದೆನ ತಲೆಮಾರ್ಗೆ ದಾಟ್ಸುವ ಮಾರ್ಗ’ ಎಂಬ ವಿಷಯದ ಕುರಿತು ಮೇಜರ್ ಡಾ. ಕುಶ್ವಂತ್ ಕೋಳಿಬೈಲ್ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 1ರಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಅಪರಾಹ್ನ 2ರಿಂದ

ಕವಿಗೋಷ್ಠಿ ನಡೆಯಲಿದೆ. ಕರುಣಾಕರ ನಿಡಿಂಜಿ ಅರೆಭಾಷೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವದೇವಿ ಅವನೀಶ್ಚಂದ್ರ, ರೇಷ್ಮಾ ಕುಕ್ಕನೂರು, ಸಹನಾ ಕಾಂತಬೈಲು, ಜಯಲಕ್ಷ್ಮೀ ಕಡ್ಲೇರ, ಉದಯಕುಮಾರಿ ಚೆಂಬು, ಜೀವನ್ ಪುರ, ದೀಪಶ್ರೀ ಆಡ್ತಲೆ, ಮನೋಜ್ ಕುಡೆಕಲ್ಲು, ಮುಕ್ಕಾಟಿ ಹರಿಣಿ ಗಿರೀಶ್ ಇವರು ಕವನ ವಾಚನ ಮಾಡಲಿದ್ದಾರೆ.
ಅ.3ರಿಂದ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಸಮಾರೋಪ ಭಾಷಣ ಮಾಡಲಿದ್ದಾರೆ.ವಿಶ್ರಾಂತ ಪ್ರಾಂಶುಪಾಲರು ಮತ್ತು ಲೇಖಕರಾದ ಕುಯಿಂತೋಡು ದಾಮೋದರ ಸನ್ಮಾನ ನೆರವೇರಿಸಲಿದ್ದಾರೆ. ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಚೆಂಬು ಇದರ ಆಡಳಿತಾಧಿಕಾರಿ ವಿಸ್ಮಯಿ, ಪ್ರಮುಖರಾದ ಲೋಕನಾಥ ಅಮೆಚೂರ್, ಯು.ಬಿ. ಚಕ್ರಪಾಣಿ, ನವೀನ್ ರಾಮಕಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರದೇಶದ ಕೃಷಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಸಹಕಾರ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.ಸಂಜೆ 5ರಿಂದ

ಅರೆಭಾಷೆ ಸಾಂಸ್ಕೃತಿಕ ಸಂಜೆ ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲುದೆ. ಶಶಿಕಾಂತ್ ಮಿತ್ತೂರು, ಸುಳ್ಯ ಇವರ ತಂಡದಿಂದ ಅರೆಭಾಷೆ ಸಿರಿ ಸಂಸ್ಕೃತಿ ನೃತ್ಯರೂಪಕ ಹಾಗೂ ರವಿಚಂದ್ರ ಪೆರುಮುಂಡ ಚೆಂಬು ಮತ್ತು ಬಳಗ ಇವರಿಂದ ‘ಕಾನದ ಮಾಯೆ’ ಅರೆಭಾಷೆ ಯಕ್ಷಗಾನ ನಡೆಯಲಿದೆ.
ಅರೆಭಾಷೆ ಸಾಹಿತ್ಯ ಸಮ್ಮೇಳನ ಅಂಗವಾಗಿ ಅರೆಭಾಷೆ ಕವನ ಸ್ಪರ್ಧೆ, ಅರೆಭಾಷೆ ಗಾದೆ ಬರೆಯುವ ಸ್ಪರ್ಧೆ. ಅರೆಭಾಷೆ ಮೂಲ ಪದಗಳ ಬರೆಯುವ ಸ್ಪರ್ಧೆ ಮತ್ತು ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ವಾಹನ ಮೆರವಣಿಗೆ, ಪುರಾತನ ಸೊತ್ತಗಳ ಪ್ರದರ್ಶನ, ತಿಂಡಿ ತಿನಸು ಮಳಿಗೆ, ಹೂವಿನ ಗಿಡಗಳ ಮಳಿಗೆ, ಚಿತ್ರ ಮಳಿಗೆ, ಪುಸ್ತಕ ಮಳಿಗೆ, ನೆಟ್ಟಿ ಬಿತ್ತನ ಮಳಿಗೆ, ಬಟ್ಟೆಬರೆಗಳ ಮಳಿಗೆ, ಆಟಿಕೆ ಮತ್ತು ಆಭರಣ ಮಳಿಗೆ ವಿಶೇಷ ಆಕರ್ಷಣೆಗಳು ಇರಲಿದೆ ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯ ಸಂಚಾಲಕರಾದ ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್,ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.
















