ಬೆಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆ, ಅಪಘಾತ ವಲಯಗಳ ವೈಜ್ಞಾನಿಕ ಸುಧಾರಣೆ ಹಾಗೂ ತ್ವರಿತ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 24ನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಸುರಕ್ಷತೆಯು ಕೇವಲ ಒಂದು ಇಲಾಖೆಯ ಕೆಲಸವಲ್ಲ. ಪೊಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಮಹತ್ವದಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತ ಮಾಡಿ ಪರಾರಿಯಾಗುವ ವಾಹನಗಳನ್ನು ಪತ್ತೆಹಚ್ಚಲು ಗುರುತಿಸಲಾದ 87 ಸ್ಥಳಗಳ ಪೈಕಿ 27 ಕಡೆ ಎ.ಐ ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 20 ಕಡೆ ಇ-ಚಲನ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈಗಾಗಲೇ 6,500 ಚಲನ್ಗಳನ್ನು ದಾಖಲಿಸಲಾಗಿದ್ದು, ಉಳಿದ 60 ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ಚಾಲನಾ ತರಬೇತಿ ಸಂಸ್ಥೆಗಳ ಮೇಲೆ ಸಾರಿಗೆ ಇಲಾಖೆ ನಿರಂತರ ನಿಗಾ ಇಡಬೇಕು ಹಾಗೂ ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹೆಲ್ಮೆಟ್, ಸೀಟ್ ಬೆಲ್ಟ್, ವೇಗ ನಿಯಂತ್ರಣ, ಮದ್ಯಪಾನ ಮತ್ತು ಮೊಬೈಲ್ ಬಳಕೆ ನಿಷೇಧದ ಕುರಿತ ಜಾಗೃತಿ ಮೂಡಿಸುವ ವಿಡಿಯೊಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು
ಸೂಚಿಸಿದರು.ಈ ವರ್ಷ ಏಪ್ರಿಲ್ 15ರಿಂದ ಜಾರಿಯಾಗಿರುವ ‘ಪಿಎಂ-ರಹತ್’ ಯೋಜನೆಯಡಿ ಅಪಘಾತದ ಸಂತ್ರಸ್ತರಿಗೆ 7 ದಿನಗಳವರೆಗೆ ಗರಿಷ್ಠ 1.50 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ‘ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ’ ಯೋಜನೆಯಡಿ ಹೆಚ್ಚುವರಿ 1 ಲಕ್ಷ ನೆರವು ನೀಡಲಾಗುತ್ತಿದೆ. ರಾಜ್ಯದ 3,445 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಣಿಯಾಗಿವೆ ಎಂದು ವಿವರ ನೀಡಿದರು.ತುರ್ತು ಸ್ಪಂದನೆಗಾಗಿ 108 ಮತ್ತು 102 ಸೇವೆಗಳನ್ನು 112 ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದೆ. ಜೊತೆಗೆ 100 ಹೊಸ ಬಿಎಲ್ಎಸ್ ಆಂಬುಲೆನ್ಸ್ಗಳ ಖರೀದಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿವೆ ಎಂದರು.
2026-27ನೇ ಸಾಲಿನ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ ಒಟ್ಟು ರೂ. 322 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಇದರಲ್ಲಿ ರೂ. 233.11 ಕೋಟಿಯನ್ನು ಮುಂದುವರಿದ ಕಾಮಗಾರಿಗಳಿಗೆ ಹಾಗೂ ರೂ. 88.89 ಕೋಟಿಯನ್ನು ಹೊಸ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾಧ್ಯಮಗಳು, ಚಿತ್ರಮಂದಿರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ವಿಭಾಗದ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
















