ಅಲೆಕ್ಕಾಡಿ:ಗೋವಿನ ಸೇವೆ ಜೀವನದ ಶ್ರೇಷ್ಠವಾದ ಸೇವೆ.ಗೋವನ್ನು ಸಾಕುವವರು ಪವಿತ್ರವಾದ ಭಾವನೆಯಿಂದ ಸಾಕಬೇಕು. ಗೋವಿನ ಸೇವೆ ಮಾಡುವವರು ಶ್ರೀಕೃಷ್ಣನಂತೆ ಎಂದು ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯರಾದ ಶ್ರೀ ದೇವಬಾಬಾಜಿ ಹೇಳಿದ್ದಾರೆ.
ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಆಶ್ರಯದಲ್ಲಿ

ಭಾರತ್ ಆಟೋಕಾರ್ಸ್ ಮಂಗಳೂರು ಇದರ ಸಹಯೋಗದಲ್ಲಿ ಮುರುಳ್ಯ ಗ್ರಾಮದ ನೀರುಡೇಲುವಿನಲ್ಲಿ ನಡೆದ ದೀಪಾವಳಿಯ ಗೋಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಕಪಿಲ ಗೋವಿನ ಹಾಲನ್ನು ನಿರಂತರ ಸೇವಿಸಿದರೆ ರೋಗಗಳಿಂದ ದೂರ ಇದ್ದು ಆರೋಗ್ಯವನ್ನು ಸಂರಕ್ಷಣೆ ಮಾಡಬಹುದು ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾಗಿದ್ದ
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ಮಲೆನಾಡು ಗಿಡ್ಡ ಗೋವನ್ನು ಸಂರಕ್ಷಣೆ ಮತ್ತು ಸಂವರ್ಧನೆ ಮಾಡುವ ಅಕ್ಷಯ್ ಆಳ್ವ ಅವರ ಸೇವೆ ಮಹತ್ತರವಾದುದು.ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಒಲಿದು ಬರಲಿ ಎಂದು ಆಶಿಸಿದರು.ಗೇರು ಅಭಿವೃದ್ಧಿ ನಿಗಮದ

ಅಧ್ಯಕ್ಷೆ ಮಮತಾ ಜೆ.ಎಸ್.ಗಟ್ಟಿ ಮಾತನಾಡಿ ಅಕ್ಷಯ್ ಆಳ್ವ ಅವರ ಸೇವೆ ಮಾದರಿಯಾದುದು, ಇವರ ಈ ಕಾರ್ಯ ದೇಶದಾದ್ಯಂತ ಪಸರಿಸಬೇಕು,ಇವರ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.ಮುಂದೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಒಲಿದು ಬರಲಿ ಎಂದರು. ಗೋವು ತಾಯಿ ಇದ್ದಂತೆ. ತಂದೆ, ತಾಯಿಯರನ್ನು ಅತ್ಯಂತ ಗೌರವದಿಂದ ಕಂಡು ಮಕ್ಕಳು ಸಂರಕ್ಷಿಸಬೇಕು.ಗೋವನ್ನು ಪ್ರೀತಿಯಿಂದ ಸಲಹಬೇಕು ಎಂದರು. ಬೆಂಗಳೂರಿನ

ಫೌಂಡೇಶನ್ ಫಾರ್ ಕ್ವಾಲಿಟಿ ಇಂಡಿಯಾದ ನಿರ್ದೇಶಕರು ಮತ್ತು ಸಿಇಒ ಹಾಗು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ತುಪ್ಪಿಲ್ ವೆಂಕಟೇಶ್ ಮಾತನಾಡಿದರು.ಅಕ್ಷಯ್ ಆಳ್ವ, ಅಮೃತ ಅಕ್ಷಯ್ ಆಳ್ವ ದಂಪತಿಗಳನ್ನು ಅವರು ಸನ್ಮಾನಿಸಿದರು.ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ತಂಡದ ಸಂಚಾಲಕರು ಹಾಗು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಕ್ಷಯ್ ಆಳ್ವ ‘ನಮ್ಮ ಅಭಿಯಾನದ ಅಂಗವಾಗಿ

5 ಸಾವಿರ ಮಂದಿಗೆ ಒಂದು ಗಂಡು ಮತ್ತು ಹೆಣ್ಣು ಮಲೆನಾಡು ಗಿಡ್ಡ ಗೋವನ್ನು ಉಚಿತವಾಗಿ ವಿತರಿಸಲಾಗಿದೆ. ರಾಜ್ಯದಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ, ಬೆಂಬಲ ದೊರೆತಿದೆ ಎಂದು ಹೇಳಿದರು.ಮಂಗಳೂರು ಜನತಾ ಬಜಾರ್ ಅಧ್ಯಕ್ಷ ಕೆ.ಪ್ರಸನ್ನ ಭಟ್ ಗುಂಡಿಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಮಂಗಳೂರಿನ ವೇದಮಾರೋಗ್ಯ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸಚಿನ್ ನಡ್ಕ, ಮೈಸೂರಿನ ಬ್ಯಾಂಕ್ ಕಾಲೋನಿ ಗೃಹಿಣಿ ಸಮಾಜದ ಅಧ್ಯಕ್ಷೆ ಕೆ.ಸಿ.ಮಂಜುಳ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಉಜಿರೆ ಇಲ್ಲಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಹಾಗು

ದೈವ ನರ್ತಕರಾದ ಡಾ.ರವೀಶ್ ಪಡುಮಲೆ, ಹಾಸನ ಅರಸೀಕೆರೆ ಉಪ ಕಾರಾಗ್ರಹದ ಅಧೀಕ್ಷಕರಾದ ಎಂ.ಎನ್.ಸದಾಶಿವಯ್ಯ, ಮಂಡ್ಯ ರೈತ ಶಾಲೆಯ ಸಂಸ್ಥಾಪಕ ಸತ್ಯಮೂರ್ತಿ, ಬೆಂಗಳೂರುಎಂ.ಎನ್.ರಾಮಯ್ಯ ತಾಂತ್ರಿಕ ವಿದ್ಯಾಲಯದ ನಿವೃತ್ತ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಹಾಗು ಕೃಷಿ ಆಶ್ರಮ ರುವಾರಿಗಳಾದ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರ, ಪತ್ರಕರ್ತ ಡಾ.ನಾಗೇಶ್ ರಾಗಿಮುದ್ದೇನಹಳ್ಳಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ

ಗೋಕಾಳಜಿ ಮತ್ತು ಸಂರಕ್ಷಣೆಯ ಸಾಧಕರಾದ ತಿರುಮಲೇಶ್ವರ, ಸವಿತಾ ಕುಡುಂಬಿಲ ಮನೆ ಕುಕ್ಕುಜಡ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಮೃತ ಅಕ್ಷಯ್ ಆಳ್ವ ಸ್ವಾಗತಿಸಿ,ಅಕ್ಷಯ್ ಆಳ್ವ ವಂದಿಸಿದರು. ಮಧು.ಪಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಕ್ಷಯ್ ಆಳ್ವ ಅವರನ್ನು ಶಾಸಕಿ ಭಾಗೀರಥಿ ಮುರುಳ್ಯ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗೋಪೂಜೆ,
ಗವ್ಯೋತ್ಪನ್ನ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

















